ರಾಜ್ಯ

ದಕ್ಷಿಣ ಕನ್ನಡ ಮೂಲದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾ.ಸಯೈದ್ ಅಬ್ದುಲ್ ನಜೀರ್ ಆಂಧ್ರ ಪ್ರದೇಶ ರಾಜ್ಯಪಾಲರಾಗಿ ನೇಮಕ

Sumana Upadhyaya

ಬೆಂಗಳೂರು: ಸುಪ್ರೀಂ ಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಸೈಯದ್ ಅಬ್ದುಲ್ ನಜೀರ್ (Ret Judge Sayed Abdul Nazeer) ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಆಂಧ್ರಪ್ರದೇಶದ ನೂತನ ರಾಜ್ಯಪಾಲರಾಗಿ ನೇಮಕ ಮಾಡಿದ್ದಾರೆ. 

ಇಂದು 12 ನೂತನ ರಾಜ್ಯಪಾಲ ಮತ್ತು ಲೆಫ್ಟಿನೆಂಟ್ ಗವರ್ನರ್​ಗಳ ಪಟ್ಟಿಯಲ್ಲಿ ಅಬ್ದುಲ್ ನಜೀರ್ ಹೆಸರೂ ಇದೆ. ದಕ್ಷಿಣಕನ್ನಡ ಜಿಲ್ಲೆಯವರಾದ ಅಬ್ದುಲ್ ನಜೀರ್ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಕಳೆದ ತಿಂಗಳು ಜನವರಿ 4ರಂದು ನಿವೃತ್ತರಾಗಿದ್ದರು.

ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದಿರೆ ತಾಲೂಕಿನ ಬೆಳುವಾಯಿ ಗ್ರಾಮದಲ್ಲಿ ಹುಟ್ಟಿದ ಎಸ್ ಅಬ್ದುಲ್ ನಾಜಿರ್, ಮಹಾವೀರ ಕಾಲೇಜಿನಲ್ಲಿ ಬಿಕಾಂ ಮತ್ತು ಎಸ್​ಡಿಎಂ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದಿದ್ದರು. ನಂತರ ಕರ್ನಾಟಕ ಹೈಕೋರ್ಟ್ ವಕೀಲರಾಗಿ ನೇಮಕವಾದರು. 2003ರಲ್ಲಿ ಅದೇ ಹೈಕೋರ್ಟ್​ನಲ್ಲಿ ಹೆಚ್ಚುವರಿ ನ್ಯಾಯಾಧೀಶರು ಮತ್ತು ನಂತರ ಖಾಯಂ ನ್ಯಾಯಾಧೀಶರಾಗಿ ನೇಮಕವಾದರು. 2017ರ ಫೆಬ್ರುವರಿಯಲ್ಲಿ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ವೇಳೆಯೇ 2017ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದರು. ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗದೇ ನೇರವಾಗಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾದ ಮೂರನೇ ಜಡ್ಜ್ ಅವರಾಗಿದ್ದಾರೆ.

ಐತಿಹಾಸಿಕ ತೀರ್ಪುಗಳಲ್ಲಿ ಭಾಗಿ: ಮುಸ್ಲಿಂ ಧರ್ಮದ ವಿವಾದಾತ್ಮಕ ತ್ರಿವಳಿ ತಲಾಖ್ ಪ್ರಕರಣದ ವಿಚಾರಣೆ ನಡೆಸಿದ ಬಹು ಧರ್ಮೀಯ ಪೀಠದಲ್ಲಿ ಮತ್ತು ಅಯೋಧ್ಯೆ ವಿವಾದದ ಬಗ್ಗೆ ಸುಪ್ರೀಂ ತೀರ್ಪಿನ 5 ನ್ಯಾಯಾಧೀಶರ ಪೀಠದಲ್ಲಿ ನ್ಯಾಯಮೂರ್ತಿ ಸೈಯದ್ ಅಬ್ದುಲ್ ನಜೀರ್ ಭಾಗವಾಗಿದ್ದರು.

2017ರಲ್ಲಿ ಸುಪ್ರೀಂಕೋರ್ಟ್ ಜಡ್ಜ್ ಆಗಿ ನೇಮಕವಾದ ಬಳಿಕ ಅಬ್ದುಲ್ ನಜೀರ್ ಕೆಲ ಮಹತ್ವದ ಪ್ರಕರಣಗಳ ತೀರ್ಪು ನೀಡಿದ ನ್ಯಾಯಪೀಠಗಳಲ್ಲಿ ಭಾಗಿಯಾಗಿದ್ದಾರೆ. 2017ರಲ್ಲಿ ತ್ರಿವಳಿ ತಲಾಖ್ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠದಲ್ಲಿ ಅಬ್ದುಲ್ ನಜೀರ್ ಇದ್ದರು. ಆ ಐತಿಹಾಸಿಕ ತೀರ್ಪಿನಲ್ಲಿ ನ್ಯಾಯಪೀಠವು ತ್ರಿವಳಿ ತಲಾಖ್ ನ್ನು ಅಸಿಂಧುಗೊಳಿಸಿತ್ತು.

2019ರ ಅಯೋಧ್ಯೆ ರಾಮಜನ್ಮಭೂಮಿ ಪ್ರಕರಣದಲ್ಲಿ ತೀರ್ಪು ನೀಡಿದ್ದ ಸರ್ವೋಚ್ಚ ನ್ಯಾಯಪೀಠದಲ್ಲೂ ಅಬ್ದುಲ್ ನಜೀರ್ ಇದ್ದರು. 

SCROLL FOR NEXT