ರಾಜ್ಯ

ಪ್ರೊ.ನಂಜುಂಡಪ್ಪ ವರದಿ ಪರಿಶೀಲಿಸುವ ಅಗತ್ಯವಿದೆ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

Manjula VN

ಬೆಂಗಳೂರು: ರಾಜ್ಯದ ಅಭಿವೃದ್ಧಿಗೆ ಅನುಗುಣವಾಗಿ ತಾಲ್ಲೂಕುಗಳನ್ನು ವರ್ಗೀಕರಿಸಿರುವ ಪ್ರೊ.ನಂಜುಂಡಪ್ಪ ಅವರ ವರದಿಯನ್ನು ರಾಜ್ಯ ಸರ್ಕಾರ ಪರಿಶೀಲಿಸಬೇಕೆಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೇಳಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅವರು, ಮೀಸಲು ಕ್ಷೇತ್ರಕ್ಕೆ ಅನುದಾನ ಸಿಗದಿರುವ ಬಗ್ಗೆ ಪ್ರಸ್ತಾಪಿಸಿದರು.

ಈ ವೇಳೆ ಮಾತನಾಡಿ ಸ್ಪೀಕರ್ ಕಾಗೇರಿ ಅವರು, ಹಿಂದುಳಿದ ತಾಲೂಕುಗಳಲ್ಲಿ ಪ್ರಾದೇಶಿಕ ಅಸಮತೋಲನ ಕುರಿತು ನಂಜುಂಡಪ್ಪ ವರದಿ ಪರಿಶೀಲಿಸಬೇಕಿದೆ. ವರದಿ ಬಂದು 25 ವರ್ಷಗಳಿಗೂ ಹೆಚ್ಚು ಕಾಲ ಕಳೆದಿದೆ. ಈಗ ಬಹಳಷ್ಟು ಬದಲಾಗಿದೆ ಎಂದು ಹೇಳಿದರು.

ಬಳಿಕ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು, ನಂಜುಂಡಪ್ಪ ವರದಿಯಲ್ಲಿ ಪ್ರಸ್ತಾಪಿತವಾದ ಹಿಂದುಳಿದ ತಾಲೂಕುಗಳ ಪೈಕಿ ಅನೇಕ ತಾಲೂಕಿನ ಚಹರೆ ಈಗ ಬದಲಾಗಿದೆ. ಹಲವು ಕಡೆ ನೀರಾವರಿಯಾಗಿದೆ, ಇನ್ನು ಕೆಲವೆಡೆ ಕೈಗಾರಿಕೆಗಳು ಸ್ಥಾಪನೆಯಾಗಿವೆ. ಹೊಸ ತಾಲೂಕುಗಳು ರಚನೆಯಾಗಿವೆ. ಹೀಗಾಗಿ ಪ್ರಾದೇಶಿಕ ಅಸಮತೋಲನೆ, ಹಿಂದುಳಿದ ಪ್ರದೇಶದ ಪುನರ್‌ ಪರಿಶೀಲನೆಯಾಗುವ ಅಗತ್ಯವಿದೆ ಎಂದು ಹೇಳಿದರು.

ಮೂಲಸೌಕರ್ಯ ಇಲಾಖೆ ಈಗಾಗಲೇ ಈ ಬಗ್ಗೆ ವರದಿ ಸಲ್ಲಿಸಿದೆ. ವಿಸ್ತೃತ ವರದಿ ನೀಡಲು ಸೂಚನೆ ನೀಡಲಾಗಿದೆ. ಮತ್ತೂಂದು ಸಮಿತಿ ರಚಿಸುವ ಕುರಿತು ಮುಖ್ಯಮಂತ್ರಿಯವರೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ತಿಳಿಸಿದರು.

SCROLL FOR NEXT