ರಾಜ್ಯ

ತಂತ್ರಜ್ಞಾನ ಬಳಸಿಕೊಂಡು ಸುಸ್ಥಿರ ಗಣಿಗಾರಿಕೆಯತ್ತ ಗಮನಹರಿಸಿ: ಉದ್ಯಮಿಗಳಿಗೆ ಸಿಎಂ ಬೊಮ್ಮಾಯಿ

Manjula VN

ಬೆಂಗಳೂರು: ಗಣಿ ಉದ್ಯಮದ ಬಹುದೊಡ್ಡ ಜವಾಬ್ದಾರಿ ಸುಸ್ಥಿರ ಗಣಿಗಾರಿಕೆಯಾಗಿದ್ದು, ಉದ್ಯಮದ ಬೆಳವಣಿಗೆಗೆ ನೆರವಾಗಲು ಸರ್ಕಾರ ತನ್ನ ನೀತಿಗಳನ್ನು ಸರಳಗೊಳಿಸುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಹೇಳಿದರು.

ಬೆಂಗಳೂರಿನಲ್ಲಿ ಇಂಡಿಯನ್ ಗ್ರಾನೈಟ್ ಮತ್ತು ಸ್ಟೋನ್ ಇಂಡಸ್ಟ್ರಿ ಆಯೋಜಿಸಿದ್ದ 'ಸ್ಟೋನಾ-2023' 15ನೇ ಅಂತಾರಾಷ್ಟ್ರೀಯ ಗ್ರಾನೈಟ್ ಮತ್ತು ಕಲ್ಲುಗಳ ವಸ್ತು ಪ್ರದರ್ಶನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಯಾವುದೇ ಕೈಗಾರಿಕೋದ್ಯಮಿಗೆ ಕಿರುಕುಳ ನೀಡದಂತೆ ಹಾಗೂ ಅವರಿಗಿರುವ ಎಲ್ಲಾ ಅಡೆತಡೆಗಳನ್ನು ನಿವಾರಿಸಲು ಸರ್ಕಾರ ಸಿದ್ಧವಿದೆ ಎಂದು ಭರವಸೆ ನೀಡಿದರು.

ಕರ್ನಾಟಕದ ಗಣಿಗಾರಿಕೆ ನೀತಿಯು ರಾಜಸ್ಥಾನ ಮತ್ತು ಗುಜರಾತ್‌ಗಿಂತ ಭಿನ್ನವಾಗಿದೆ. ಏಕೆಂದರೆ, ರಾಜ್ಯದಲ್ಲಿ ಗಣಿಗಾರಿಕೆಯಲ್ಲಿ ಸಾಕಷ್ಟು ವ್ಯತ್ಯಾಸವಿದೆ ಎಂದು ಹೇಳಿದರು.

ಇದೇ ವೇಳೆ ಉದ್ಯಮಕ್ಕೆ ಅಗತ್ಯವಿರುವ ಎಲ್ಲಾ ಬೆಂಬಲ ನೀಡುವುದಾಗಿ ಭರವಸೆ ನೀಡಿದ ಸಿಎಂ, ಉದ್ಯಮ ಸ್ನೇಹಿ ನೀತಿಗಳನ್ನು ಹೊಂದಿರುವುದಾಗಿ ತಿಳಿಸಿದರು.

ಉದ್ಯಮಿಗಳು ತಂತ್ರಜ್ಞಾನ ಬಳಸಿಕೊಂಡು ಸುಸ್ಥಿರ ಗಣಿಗಾರಿಕೆಯತ್ತ ಗಮನಹರಿಬೇಕಿದೆ. ಇದು ಗಣಿಗಾರಿಕೆ ಕ್ಷೇತ್ರಕ್ಕೆ ಆರ್ಥಿಕತೆಗೆ ಅನುಕೂಲವಾಗಲಿದೆ. ಅಜಾಗರೂಕ ಗಣಿಗಾರಿಕೆ ಆತಂಕಕ್ಕೆ ಕಾರಣವಾಗಿದೆ. ಅವೈಜ್ಞಾನಿಕ ಗಣಿಗಾರಿಕೆಯು ಹೆಚ್ಚು ತ್ಯಾಜ್ಯಕ್ಕೆ ಕಾರಣವಾಗುತ್ತದೆ. ಇದು ಆರ್ಥಿಕತೆಗೆ ಮಾತ್ರವಲ್ಲದೆ ಮಾಲೀಕರಿಗೂ ನಷ್ಟವನ್ನು ಉಂಟುಮಾಡುತ್ತದೆ. ಹೀಗಾಗಿ ಉದ್ಯಮಿಗಳು ಗಣಿಗಾರಿಕೆಯಲ್ಲಿನ ತ್ಯಾಜ್ಯವನ್ನು ಕಡಿಮೆ ಮಾಡಲು ಆಧುನಿಕ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳನ್ನು ಬಳಸಬೇಕು ಎಂದು ಕರೆ ನೀಡಿದರು.

SCROLL FOR NEXT