ರಾಜ್ಯ

ರಾಜ್ಯದ ಅರಣ್ಯ ಸಿಬ್ಬಂದಿ ತಮಿಳುನಾಡಿನ ಮೀನುಗಾರನನ್ನು ಗುಂಡಿಕ್ಕಿ ಕೊಂದಿಲ್ಲ: ಸಚಿವ ವಿ ಸೋಮಣ್ಣ

Ramyashree GN

ಸೇಲಂ/ಮೈಸೂರು: ಸೇಲಂ ಜಿಲ್ಲೆಯ ಎಂ ರಾಜು (40) ಸಾವಿನಲ್ಲಿ ರಾಜ್ಯದ ಅರಣ್ಯ ಇಲಾಖೆಯ ಪಾತ್ರವಿಲ್ಲ ಎಂದು ಕರ್ನಾಟಕ ವಸತಿ ಸಚಿವ ವಿ ಸೋಮಣ್ಣ ಶನಿವಾರ ಹೇಳಿದ್ದಾರೆ. ಮೆಟ್ಟೂರು ಬಳಿ ಮೀನುಗಾರಿಕೆ ನಡೆಸುತ್ತಿದ್ದ ರಾಜು ಅವರನ್ನು ಅರಣ್ಯ ಸಿಬ್ಬಂದಿ ಗುಂಡಿಕ್ಕಿ ಕೊಂದಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದರು.

ಆದರೆ, ಮೃತನನ್ನು ಕಳ್ಳಬೇಟೆಗಾರ ಎಂದು ಬಣ್ಣಿಸಿದ ಸೋಮಣ್ಣ, ವ್ಯಕ್ತಿ ಗುಂಡೇಟಿನಿಂದ ಮೃತಪಟ್ಟಿಲ್ಲ. ಗುಂಡು ಹಾರಿಸಿದ ಸ್ಥಳದಿಂದ ಅರಣ್ಯ ಸಿಬ್ಬಂದಿ ಜಿಂಕೆಯ ಶವಗಳು ಮತ್ತು ದೇಶೀ ನಿರ್ಮಿತ ಬಂದೂಕುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು. ಎಂಟು ವರ್ಷಗಳ ಹಿಂದೆ ಕರ್ನಾಟಕದ ಅರಣ್ಯ ಭೂಮಿಯಲ್ಲಿ ಕಳ್ಳಬೇಟೆ ನಡೆಸುತ್ತಿದ್ದಾಗ ರಾಜುವನ್ನು ಬಂಧಿಸಲಾಗಿತ್ತು.

'ಕಾವೇರಿಯಲ್ಲಿ ಮೀನುಗಾರಿಕೆಗೆ ಸಾವಿರಾರು ಮಂದಿ ಆಗಮಿಸುತ್ತಿದ್ದು ಯಾವುದೇ ಸಮಸ್ಯೆ ಎದುರಿಸಿಲ್ಲ. ತಮಿಳುನಾಡಿನ ಆಸ್ಪತ್ರೆಯಿಂದ ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಸತ್ಯ ಹೊರಬೀಳಲಿದೆ. ತಮಿಳುನಾಡಿನ ಅಧಿಕಾರಿಗಳೊಂದಿಗೆ ಸರ್ಕಾರ ಮಾತುಕತೆ ನಡೆಸಲಿದೆ ಎಂದು ಸೋಮಣ್ಣ ಹೇಳಿದರು.

'ರಾಜು ಅವರ ಕುಟುಂಬವು ಶನಿವಾರ ಸಂಜೆಯವರೆಗೆ ಮರಣೋತ್ತರ ಪರೀಕ್ಷೆಗೆ ಒಪ್ಪಿಗೆ ನೀಡಲು ನಿರಾಕರಿಸಿತು. ಅನೇಕ ಬೇಡಿಕೆಗಳನ್ನು ಮುಂದಿಟ್ಟಿತು. ವಿಶೇಷವಾಗಿ, ಅವರು ಕರ್ನಾಟಕ ಸರ್ಕಾರದ ಮೌನವನ್ನು ಪ್ರಶ್ನಿಸಿದರು ಮತ್ತು ಆ ರಾಜ್ಯವು ಸೂಕ್ತ ಪರಿಹಾರವನ್ನು ನೀಡಬೇಕೆಂದು ಬಯಸಿದ್ದರು. ಅಲ್ಲದೆ, ಕರ್ನಾಟಕ ಅರಣ್ಯ ಸಿಬ್ಬಂದಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಲು ಬಯಸಿದ್ದರು' ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅಂತಿಮವಾಗಿ, ಮೆಟ್ಟೂರು ಶಾಸಕ ಎಸ್ ಸದಾಶಿವಂ, ಪೊಲೀಸರು ಸೇರಿದಂತೆ ಸೇಲಂ ಜಿಲ್ಲಾಧಿಕಾರಿ ಎಸ್ ಕಾರ್ಮೆಗಂ ಅವರೊಂದಿಗೆ ಚರ್ಚಿಸಿದ ನಂತರ, ರಾಜಾ ಅವರ ಪತ್ನಿ ಹಾಗೂ ಕುಟುಂಬದವರು ಮರಣೋತ್ತರ ಪರೀಕ್ಷೆಗೆ ಒಪ್ಪಿಗೆ ನೀಡಿದರು. ಮೂಲಗಳ ಪ್ರಕಾರ, ಮರಣೋತ್ತರ ಪರೀಕ್ಷೆ ನಡೆಸಿದರೆ ಮಾತ್ರ ಪೊಲೀಸರು ಕಾರ್ಯನಿರ್ವಹಿಸಬಹುದು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ನಂತರ ಚಾಮರಾಜನಗರ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ ಸಚಿವರು, ಕರ್ನಾಟಕ ಮುಖ್ಯ ಕಾರ್ಯದರ್ಶಿಯವರ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು. 

ಶನಿವಾರ ಸಂಜೆಯಿಂದಲೇ ಮರಣೋತ್ತರ ಪರೀಕ್ಷೆ ಆರಂಭಗೊಂಡಿದ್ದು, ಬಳಿಕ ಮೃತದೇಹವನ್ನು ರಾಜಾ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು. ರಾಜಾ (ಎ) ಕರವಾಡಯ್ಯನ್ ಸೇಲಂ ಜಿಲ್ಲೆಯ ಕೊಳತ್ತೂರಿನ ಗೋವಿಂಧಪಾಡಿ ಬಳಿಯ ಅರಿಸಿಪಾಳ್ಯಂ ನಿವಾಸಿ.

ಫೆಬ್ರುವರಿ 14ರ ರಾತ್ರಿ ತಮಿಳುನಾಡು-ಕರ್ನಾಟಕ ಗಡಿಯಲ್ಲಿ ಕರ್ನಾಟಕ ಅರಣ್ಯ ಇಲಾಖೆ ಸಿಬ್ಬಂದಿ ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈರೋಡ್ ಜಿಲ್ಲೆಯ ಬರ್ಗೂರ್ ಪೊಲೀಸ್ ವ್ಯಾಪ್ತಿಯ ಕಾವೇರಿ ಪುರಂ ಬಳಿಯ ಪಾಲಾರ್ ನದಿಯಲ್ಲಿ ಶುಕ್ರವಾರ ಅವರ ಮೃತದೇಹ ತೇಲುತ್ತಿತ್ತು.

SCROLL FOR NEXT