ರಾಜ್ಯ

ಐಎಎಸ್ Vs ಐಪಿಎಸ್: ಮಾನಹಾನಿಕರ ಹೇಳಿಕೆ ನೀಡದಂತೆ ಡಿ. ರೂಪಾಗೆ ಕೋರ್ಟ್ ನಿರ್ಬಂಧ

Lingaraj Badiger

ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಯಾವುದೇ ಮಾನಹಾನಿಕರ ಹೇಳಿಕೆ ನೀಡದಂತೆ ಐಪಿಎಸ್ ಅಧಿಕಾರಿ ಡಿ.ರೂಪಾ ಹಾಗೂ ಇತರ ಎಲ್ಲಾ ಪ್ರತಿವಾದಿಗಳಿಗೆ ಸಿಟಿ ಸಿವಿಲ್ ಕೋರ್ಟ್ ಗುರುವಾರ ನಿರ್ಬಂಧ ವಿಧಿಸಿದೆ. ಇದರೊಂದಿಗೆ ರೋಹಿಣಿ ಸಿಂಧೂರಿ ಅವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

ತಮ್ಮ ವಿರುದ್ಧ ಹೇಳಿಕೆ ನೀಡದಂತೆ ಡಿ ರೂಪಾ ಅವರಿಗೆ ಹಾಗೂ ಇತರ ಪ್ರತಿವಾದಿಗಳಿಗೆ ನಿರ್ಬಂಧ ವಿಧಿಸುವಂತೆ ಕೋರಿ ರೋಹಿಣಿ ಸಿಂಧೂರಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ರೂಪಾ ಹಾಗೂ ಮಾಧ್ಯಮಗಳು ಸೇರಿದಂತೆ 66 ಪ್ರತಿವಾದಿಗಳಿಗೆ ನಿರ್ಬಂಧ ವಿಧಿಸಿದೆ.

ರೋಹಿಣಿ ಸಿಂಧೂರಿ ಅವರು ತಮ್ಮ ಅರ್ಜಿಯಲ್ಲಿ ಡಿ. ರೂಪಾ ಅವರು ಸೇರಿದಂತೆ ತಮ್ಮ ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡಿದ್ದ ಮಾಧ್ಯಮಗಳು ಸೇರಿ 66 ಜನರನ್ನು ಪ್ರತಿವಾದಿಗಳನ್ನಾಗಿ ಮಾಡಿದ್ದರು. ಡಿ. ರೂಪಾ ಅವರು ಬಿಡುಗಡೆ ಮಾಡಿದ ಫೋಟೋಗಳನ್ನು ಬಳಕೆ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸುಂತೆಯೂ ರೋಹಿಣಿ ಸಿಂಧೂರಿ ಮನವಿ ಮಾಡಿದ್ದರು.

ಐಎಎಸ್ ಅಧಿಕಾರಿಯ ಮನವಿ ಪುರಸ್ಕರಿಸಿದ ಕೋರ್ಟ್, ಡಿ ರೂಪಾ ಹಾಗೂ ಪ್ರತಿವಾದಿಗಳಿಗೆ ನಿರ್ಬಂಧ ವಿಧಿಸಿ, ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಯನ್ನು ಮಾರ್ಚ್ 7ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ.

ವಿಚಾರಣೆ ಸಂದರ್ಭದಲ್ಲಿ ರೋಹಿಣಿ ಸಿಂಧೂರಿ ಪರ ವಕೀಲರು, ರೂಪಾ ಮೌದ್ಗಿಲ್ ಅವರು ಸಾಮಾಜಿಕ ಜಾಲತಾಣದ ಮೂಲಕ ವೈಯಕ್ತಿಕ ತೇಜೋವಧೆ ಮಾಡಿದ್ದಾರೆ. ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಮೊಬೈಲ್ ನಂಬರ್ ಸಾರ್ವಜನಿಕಗೊಳಿಸಿದ್ದಾರೆ ಎಂದು ವಾದಿಸಿದ್ದರು.

SCROLL FOR NEXT