ರಾಜ್ಯ

ಹೊಸ ವರ್ಷಾಚರಣೆ: 2 ವರ್ಷಗಳ ಬಳಿಕ ನಗರದ ಪ್ರಸಿದ್ಧ ತಾಣಗಳಲ್ಲಿ ಜನವೋ ಜನ

Manjula VN

ಬೆಂಗಳೂರು: ಕೋವಿಡ್ ಆತಂಕದಿಂದ ಎರಡು ವರ್ಷಗಳಿಂದ ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಲಾಗದೆ ಬೇಸರಗೊಂಡಿದ್ದ ನಗರದ ಜನತೆ ಈ ಬಾರಿಯ ಹೊಸ ವರ್ಷವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಿದ್ದಾರೆ. ನಗರದ ಬಹುತೇಕ ಪ್ರಸಿದ್ಧ ತಾಣಗಳಲ್ಲಿ ಭಾರೀ ಜನಜಂಗುಳಿ ಕಂಡು ಬರುತ್ತಿದೆ.

ನಗರದ ಪ್ರಸಿದ್ಧ ಸ್ಥಳಗಳಾದ ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಮತ್ತು ಎಂಜಿ ರಸ್ತೆ, ಇಂದಿರಾನಗರ ಮತ್ತು ಕೋರಮಂಗಲದಂತಹ ಪ್ರದೇಶಗಳನ್ನು ಸಾಕಷ್ಟು ಜನರು ನೆರೆದಿದ್ದಾರೆ, ಶನಿವಾರ 5.30ರ ವೇಳೆಗೆ ಹೊಸ ವರ್ಷ ಸ್ವಾಗತಿಸಲು ಯುವಕ-ಯುವತಿಯರು ಈ ರಸ್ತೆಗಳಲ್ಲಿ ಭಾರೀ ಪ್ರಮಾಣದಲ್ಲಿ ಸೇರಿದ್ದರು.

ನಗರದ ವಿವಿಧ ಮೂಲೆ ಮೂಲೆಗಳಲ್ಲಿ ಜನ ಜಂಗುಳಿ, ಜನರನ್ನು ನಿಭಾಯಿಸಲು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಎಲ್ಲೆಲ್ಲೂ ಪೊಲೀಸ್ ಸಿಬ್ಬಂದಿಗಳು ಕಂಡು ಬಂದರು.

ಈ ನಡುವೆ ಸಾಂಕ್ರಾಮಿಕ ರೋಗ, ಲಾಕ್ಡೌನ್ ನಿಂದಾಗಿ ತತ್ತರಿಸಿ ಹೋಗಿದ್ದ ವ್ಯಾಪಾರ ಚಟುವಟಿಕೆಗಳು ಗರಿಗೆದರಿವೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಸಾಮಾನ್ಯಕ್ಕಿಂತ ಉತ್ತಮವಾಗಿದೆ. ಸಾಕಷ್ಟು ಜನರು ಆಗಮಿಸುತ್ತಿದ್ದ ಹಿನ್ನೆಲೆಯಲ್ಲಿ ಮೊದಲೇ ಕಾಯ್ದಿರಿಸಿದವರಿಗೆ ಅವಕಾಶ ನೀಡಲು ಸಾಧ್ಯವಾಗಲಿಲ್ಲ. ಸಂಜೆ 6 ಗಂಟೆಯ ನಂತರ ಮೊದಲು ಬಂದವರಿಗೆ ಮೊದಲ ಸೇವೆಯ ಆಧಾರದ ಮೇಲೆ ಗ್ರಾಹಕರಿಗೆ ಅನುಮತಿ ನೀಡಲಾಯಿತು ಎಂದು ಚರ್ಚ್ ಸ್ಟ್ರೀಟ್‌ನಲ್ಲಿರುವ ಕೊಕೊಸ್ ಬಾರ್ ಮತ್ತು ಕಿಚನ್‌ನ ವ್ಯವಸ್ಥಾಪಕ ವಿಕಾಸ್ ಅವರು ಹೇಳಿದ್ದಾರೆ.

ಎಂಜಿ ರಸ್ತೆಯಲ್ಲಿ ಭದ್ರತೆ ಪರಿಶೀಲಿಸಿದ ಗೃಹ ಸಚಿವ
ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಲು ಮತ್ತು ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿಯ ನೈತಿಕ ಸ್ಥೈರ್ಯವನ್ನು ಹೆಚ್ಚಿಸಲು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಶನಿವಾರ ಎಂಜಿ ರಸ್ತೆಗೆ ಭೇಟಿ ನೀಡಿ ನಾಗರಿಕರು ಶಾಂತಿ ಕಾಪಾಡಲು ಮತ್ತು ಎಚ್ಚರದಿಂದ ಇರುವಂತೆ ಮನವಿ ಮಾಡಿದರು.

SCROLL FOR NEXT