ರಾಜ್ಯ

ಸರ್ಕಾರಿ ಗೌರವದ ನಂತರವೂ ಭಕ್ತರಿಗೆ ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನ ಇರಲಿದೆ: ಸಿಎಂ ಬೊಮ್ಮಾಯಿ

Vishwanath S

ವಿಜಯಪುರ: ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದು ಅವರ ದರ್ಶನ ಪಡೆಯಲು ಲಕ್ಷೋಪಾದಿ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. 

ಸಿದ್ಧೇಶ್ವರ ಶ್ರೀಗಳಿಗೆ ಸರ್ಕಾರಿ ಸಕಲ ಗೌರವ ಸಲ್ಲಿಸಲು ನಿರ್ಧರಿಸಲಾಗಿದೆ. ಇನ್ನು ಶಿಷ್ಟಾಚಾರದಂತೆ ಸೂರ್ಯಾಸ್ತದ ಒಳಗೆ ಸರ್ಕಾರಿ ಗೌರವ ಸಲ್ಲಿಸಬೇಕಿದ್ದು ಹೀಗಾಗಿ ಸಂಜೆ 5.15ಕ್ಕೆ ಆರಂಭಗೊಳ್ಳಲಿದೆ. ಇನ್ನು ಲಕ್ಷೋಪಾದಿ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವುದರಿಂದ ಸರ್ಕಾರಿ ಗೌರವ ಮುಗಿದ ಮೇಲೆಯೂ ಭಕ್ತರಿಗೆ ದರ್ಶನ ವ್ಯವಸ್ಥೆ ಮುಂದುವರೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 

ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನಕ್ಕೆ ಸೈನಿಕ ಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಪಾಂಡಿತ್ಯಪೂರ್ಣ ತತ್ವಜ್ಞಾನಿಗಳ ದರ್ಶನ ಪಡೆದುಕೊಳ್ಳಲು ಲಕ್ಷೋಪಾದಿಯಲ್ಲಿ ಭಕ್ತರು ಬರುತ್ತಿದ್ದಾರೆ. ಇನ್ನು ಶ್ರೀಗಳ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ಶ್ರೀಗಳ ಅಂತಿಮ ದರ್ಶನಕ್ಕೆ ಸಾಗರೋಪಾದಿಯಲ್ಲಿ ಭಕ್ತರು ಬರುತ್ತಿದ್ದು ಹೀಗಾಗಿ ಸರ್ಕಾರಿ ಗೌರವದ ನಂತವೂ ಭಕ್ತರಿಗೆ ಅಂತಿಮ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ. ಹೀಗಾಗಿ ಭಕ್ತರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು. 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ವಿವಿಧ ಮಠಾಧೀಶರು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಚಿವರು, ಶಾಸಕರು ಹಾಗು ಅಪಾರ ಭಕ್ತರು ಅಂತಿಮ ದರ್ಶನ ಪಡೆಯುತ್ತಿದ್ದಾರೆ. 

ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಶ್ರೀಗಳ ಅಂತಿಮ ಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ಸರ್ಕಾರ ನಿರ್ದೇಶಿಸಿದೆ. ಅಂತಿಮ ದರ್ಶನಕ್ಕೆ ಭಕ್ತರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಜಿಲ್ಲೆಯ ಎಲ್ಲ ಶಾಲಾ-ಕಾಲೇಜು ಮತ್ತು ಸರ್ಕಾರಿ ಕಚೇರಿಗಳಿಗೆ ಸರ್ಕಾರ ರಜೆ ಘೋಷಿಸಿದೆ. ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ತಿಳಿಸಿದ್ದಾರೆ.

SCROLL FOR NEXT