ರಾಜ್ಯ

ಮಹದಾಯಿ ಕುಡಿಯುವ ನೀರಿನ ಯೋಜನೆಗೆ ಮುಂದಾಗುತ್ತೇವೆ: ಗೋವಿಂದ್ ಕಾರಜೋಳ

Manjula VN

ಬೆಂಗಳೂರು: ಕರ್ನಾಟಕ ಸರ್ಕಾರ ಕಳಸಾ-ಬಂಡೂರಿ ನಾಲೆಗಳ ಮಹದಾಯಿ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸುವುದನ್ನು ಗೋವಾ ತಡೆಯಲು ಸಾಧ್ಯವಿಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಸೋಮವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ನ್ಯಾಯಾಧಿಕರಣ ರಾಜ್ಯದ ಪಾಲಿನ ನೀರಿಗೆ ಅನುಮತಿ ನೀಡಿದ್ದು, ಕೇಂದ್ರ ಜಲ ಆಯೋಗ ಕೂಡ ಒಪ್ಪಿಗೆ ನೀಡಿದೆ. ಹೀಗಾಗಿ ರಾಜ್ಯ ಸರ್ಕಾರ ಕಳಸಾ-ಬಂಡೂರಿ ನಾಲೆಗಳ ಮಹದಾಯಿ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸುವುದನ್ನು ಗೋವಾ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

''ನ್ಯಾಯಮಂಡಳಿ ಅನುಮತಿ ನೀಡಿರುವುದರಿಂದ ಯಾರೂ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಬಾರದು. ಒಕ್ಕೂಟ ವ್ಯವಸ್ಥೆಯಲ್ಲಿ ನಾವಿದ್ದೇವೆ ಎಂಬುದನ್ನು ಗೋವಾ ಸರ್ಕಾರ ಅರಿತುಕೊಳ್ಳಬೇಕು. ಕೇಂದ್ರ ಸರ್ಕಾರವು ಯೋಜನೆಗೆ ಅನುಮತಿ ನೀಡಿದ್ದು, ಗೆಜೆಟ್‌ನಲ್ಲಿಯೂ ಅಧಿಸೂಚನೆ ಮಾಡಿರುವುದರಿಂದ ಯೋಜನೆಯನ್ನು ಕಾರ್ಯಗತಗೊಳಿಸಲು ಒಂದು ತಿಂಗಳಲ್ಲಿ ಟೆಂಡರ್ ಕರೆಯುತ್ತೇವೆ. ಅದನ್ನು ಜಾರಿಗೆ ತರಲು ನಮಗೆ ಯಾರ ಅನುಮತಿಯೂ ಬೇಕಿಲ್ಲ ಎಂದು ತಿಳಿಸಿದರು.

3.9 ಟಿಎಂಸಿ ಅಡಿ ನೀರನ್ನು ಬಳಸಿಕೊಂಡು ಹುಬ್ಬಳ್ಳಿ-ಧಾರವಾಡ ಭಾಗಕ್ಕೆ ಕುಡಿಯುವ ನೀರು ಪೂರೈಸುವ ಗುರಿ ಹೊಂದಿರುವ ಈ ಯೋಜನೆಯನ್ನು ಒಂದು ವರ್ಷದೊಳಗೆ ಅನುಷ್ಠಾನಗೊಳಿಸಲಾಗುವುದು ಎಂದು ಪ್ರತಿಪಾದಿಸಿದರು.

ಇದೇ ವೇಳೆ ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕಾಗಿ ಹುಬ್ಬಳ್ಳಿಯಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆ ಹಾಸ್ಯಾಸ್ಪದ ಎಂದು ಬಣ್ಣಿಸಿದ ಅವರು, 2012-18ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಪಕ್ಷವು ಯಾವುದೇ ಕ್ರಮಗಳನ್ನು ಕೈಗೊಂಡಿರಲಿಲ್ಲ. ಅಂದು 1,080 ದಿನಗಳ ಕಾಲ ಜನರು ಹೋರಾಟ ನಡೆಸಿದ್ದರು, ಆದರೆ ಯೋಜನೆಗಾಗಿ ಹೋರಾಟ ಮಾಡಿದವರನ್ನು ಜೈಲಿಗೆ ಕಳುಹಿಸಿದ್ದು ಬಿಟ್ಟರೆ ಕಾಂಗ್ರೆಸ್ ಸರ್ಕಾರ ಏನೂ ಮಾಡಲಿಲ್ಲ ಎಂದರು.

ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಹಾಗೂ ಕೆಎಸ್ ಈಶ್ವರಪ್ಪ ಜಲಸಂಪನ್ಮೂಲ ಸಚಿವರಾಗಿದ್ದಾಗ ಸಂಪರ್ಕ ಕಾಲುವೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿತ್ತು. ಆದರೆ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕಾಲುವೆಗಳಿಗೆ ಸುರಕ್ಷತಾ ಗೋಡೆಗಳನ್ನಷ್ಟೇ ನಿರ್ಮಿಸಿತು ಎಂದರು.

ಬಳಿಕ ಸಚಿವರು 1987ರಲ್ಲಿ ಆಗಿನ ಕರ್ನಾಟಕ ಸರ್ಕಾರ ಜಲವಿದ್ಯುತ್ ಯೋಜನೆಯನ್ನು ಜಾರಿಗೆ ತರಲು ಮುಂದಾದಾಗಿನಿಂದ, ಗೋವಾ ಸರ್ಕಾರದ ಆಕ್ಷೇಪದ ನಂತರ ಯೋಜನೆ ಕೈಬಿಟ್ಟಾಗಿನಿಂದ ಯೋಜನೆಗೆ ಕೇಂದ್ರದಿಂದ ಅನುಮತಿ ಪಡೆಯಲು ನಡೆಸಿದ ಪ್ರಯತ್ನಗಳನ್ನು ಅವರು ವಿವರಿಸಿದರು.

ಗೋವಾ ಆಕ್ಷೇಪ ವ್ಯಕ್ತಪಡಿಸಿದ ಬಳಿಕ 1989ರ ಮಾರ್ಚ್‌ 16ರಂದು ಅಂದಿನ ಮುಖ್ಯಮಂತ್ರಿ ಎಸ್‌ಆರ್‌ ಬೊಮ್ಮಾಯಿ ಅವರು ಗೋವಾ ಮುಖ್ಯಮಂತ್ರಿಯನ್ನು ಭೇಟಿಯಾಗಿ ಯೋಜನೆ ಕುರಿತು ಮತ್ತೊಮ್ಮೆ ಪ್ರಸ್ತಾಪಿಸಿದರು.

“ಏಪ್ರಿಲ್ 30, 2002 ರಂದು, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರವು ತಾತ್ವಿಕವಾಗಿ ಅನುಮೋದನೆ ನೀಡಿತು, ಆದರೆ, ಎಸ್‌ಎಂ ಕೃಷ್ಣ ನೇತೃತ್ವದ ಆಗಿನ ಕಾಂಗ್ರೆಸ್ ಸರ್ಕಾರ ಯೋಜನೆ ಕುರಿತು ನಿದ್ರೆಗೆ ಜಾರಿತ್ತು. ಐದು ತಿಂಗಳವರೆಗೆ ಯೋಜನೆ ಬಗ್ಗೆ ಕಾರ್ಯನಿರ್ವಹಿಸಲಿಲ್ಲ.

ಬಳಿಕ ಜುಲೈ 9, 2002 ರಂದು ನ್ಯಾಯಾಧಿಕರಣದ ತೀರ್ಪು ಹಿಂಪಡೆದುಕೊಳ್ಳುವಂತೆ ಕೋರಿ ಅಂತರ ರಾಜ್ಯ ನದಿ ನೀರಿನ ವಿವಾದ ಕಾಯಿದೆಯ ಸೆಕ್ಷನ್ 3 ರ ಅಡಿಯಲ್ಲಿ ಗೋವಾ ಕೇಂದ್ರ ಸರ್ಕಾರದ ಮೊರೆ ಹೋಗಿತ್ತು. ಈ ಯೋಜನೆಗೆ ಕೇಂದ್ರದಿಂದ ತಡೆ ಪಡೆಯುವಲ್ಲಿ ಗೋವಾ ಯಶಸ್ವಿಯಾಯಿತು.

2004 ಮತ್ತು 2014ರಲ್ಲಿ ಯುಪಿಎ ಸರಕಾರವು ಕರ್ನಾಟಕದ ಪರವಾದ ತಡೆಯಾಜ್ಞೆಯನ್ನು ತೆರವುಗೊಳಿಸಲು ಉಪಕ್ರಮವನ್ನು ತೆಗೆದುಕೊಳ್ಳಲಿಲ್ಲ, ನಂತರ 2010 ರಲ್ಲಿ ನ್ಯಾಯಾಧಿಕರಣವನ್ನು ಸ್ಥಾಪಿಸಲಾಯಿತು, ಅಂದಿನ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಗೋವಾದಲ್ಲಿ ಚುನಾವಣಾ ಪ್ರಚಾರದ ವೇಳೆ ಕರ್ನಾಟಕಕ್ಕೆ ಒಂದು ಹನಿ ಮಹದಾಯಿ ನೀರು ಕೊಡುವುದಿಲ್ಲ ಎಂದು ಹೇಳಿದ್ದರು ಎಂದು ಆರೋಪಿಸಿದರು.

SCROLL FOR NEXT