ರಾಜ್ಯ

ಬೆಂಗಳೂರು: ಡಿಸೆಂಬರ್ 31 ರಂದು ಬೀದಿ ದೀಪಗಳಿಗೆ 15 ಲಕ್ಷ ರೂ. ವ್ಯಯಿಸಿದ ಬಿಬಿಎಂಪಿ

Manjula VN

ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಡಿಸೆಂಬರ್ 31 ರ ರಾತ್ರಿ ನಗರದ ಪ್ರಮುಖ ರಸ್ತೆಗಳಲ್ಲಿ ದೀಪಗಳ ಬೆಳಗಿಸಲು ಬಿಬಿಎಂಪಿಯ ವಿದ್ಯುತ್ ವಿಭಾಗವು 15 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ತಿಳಿದುಬಂದಿದೆ.

ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಕಮಿಷೇರಿಯಟ್ ರಸ್ತೆ, ರೆಸಿಡೆನ್ಸಿ ರಸ್ತೆ, ಮ್ಯೂಸಿಯಂ ಕ್ರಾಸ್ ರಸ್ತೆ, ಇಂದಿರಾನಗರ 100 ಅಡಿ ರಸ್ತೆ ಮತ್ತು 12ನೇ ಮುಖ್ಯರಸ್ತೆ ಮತ್ತು ಕೋರಮಂಗಲದಂತಹ ಪ್ರಮುಖ ರಸ್ತೆಗಳಲ್ಲಿ ಬೆಳಕಿಗಾಗಿ ಡೀಸೆಲ್ ಜನರೇಟರ್ ಸೆಟ್‌ಗಳನ್ನು ಬಾಡಿಗೆಗೆ ಪಡೆಯಲು ಈ ಮೊತ್ತವನ್ನು ಖರ್ಚು ಮಾಡಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

ಬಿಬಿಎಂಪಿಯ ಎಲೆಕ್ಟ್ರಿಕಲ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್.ವಿ.ರಮೇಶ್ ಅವರು ಮಾಹಿತಿ ನೀಡಿ, ಹೊಸ ವರ್ಷದ ಆಚರಣೆಯ ಸಮಯದಲ್ಲಿ ಈ ರಸ್ತೆಗಳಲ್ಲಿ ಬೆಳಕನ್ನು ಹೆಚ್ಚಿಸಬೇಕಾಗಿತ್ತು, ಡಿಸೆಂಬರ್ 31 ರ ಸಂಜೆ ಭಾರಿ ಜನಸಂದಣಿಯು ಬರುವ ನಿರೀಕ್ಷೆಗಳಿದ್ದವು. ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಮತ್ತು ಮೇಲ್ವಿಚಾರಣೆ ನಡೆಸುತ್ತಿದ್ದ ಪೊಲೀಸರಿಗೆ ಬೆಂಬಲ ನೀಡಲು ಹೆಚ್ಚುವರಿ ಬೆಳಕನ್ನು ಒದಗಿಸಿ ಸಹಾಯ ಮಾಡುವುದು ಪ್ರಮುಖವಾಗಿತ್ತು ಎಂದು ಹೇಳಿದ್ದಾರೆ.

ತಾತ್ಕಾಲಿಕವಾಗಿ ಈ ಕ್ರಮ ಕೈಗೊಳ್ಳಲಾಗಿತ್ತು. “ಬಿಬಿಎಂಪಿಯ ವಿದ್ಯುತ್ ವಿಭಾಗವು ಎಲ್ಲಾ ಬೀದಿದೀಪಗಳನ್ನು ನಿಯಮಿತವಾಗಿ ನಿರ್ವಹಿಸುತ್ತದೆ. ಕಳಪೆ ಗೋಚರತೆ ಅಥವಾ ಕತ್ತಲೆಯಿಂದಾಗಿ ಅಪರಾಧ ಪ್ರಕರಣಗಳು ದಾಖಲಾದಾಗೆಲ್ಲೆ ನಾವು ಇಂತಹ ಕ್ರಮಗಳನ್ನು ಕೈಗೊಳ್ಳುತ್ತೇವೆಂದು ತಿಳಿಸಿದ್ದಾರೆ.

ವಿಶೇಷ ಆಯುಕ್ತ, ರಸ್ತೆ ಮೂಲಸೌಕರ್ಯ ಮತ್ತು ಪೂರ್ವ ವಲಯ ಉಸ್ತುವಾರಿ ಆಯುಕ್ತ ರವೀಂದ್ರ ಪಿಎನ್ ಅವರಿಗೆ ಹೊಸ ವರ್ಷದ ಮುನ್ನಾದಿನದಂದು ಹೆಚ್ಚೆಚ್ಚು ಜನರು ಸೇರುವ ರಸ್ತೆಗಳಲ್ಲಿ ಸೂಕ್ತ ಬೆಳಕು ಒಗಿಸುವಂತೆ ಪೊಲೀಸರು ಮನವಿ ಮಾಡಿದ್ದರು ಎಂದು ಮಾಹಿತಿ ನೀಡಿದ್ದಾರೆ.

SCROLL FOR NEXT