ರಾಜ್ಯ

ಕನ್ನಡಕ್ಕೆ ಆಪತ್ತು ತರುವ ಶಕ್ತಿ ಇನ್ನೂ ಹುಟ್ಟಿಲ್ಲ, ಹುಟ್ಟುವುದೂ ಇಲ್ಲ: ಸಿಎಂ ಬೊಮ್ಮಾಯಿ

Lingaraj Badiger

ಹಾವೇರಿ: ಆದಿ ಕವಿ ಅಮೋಘವರ್ಷ ನೃಪತುಂಗರಿಂದ ಆರಂಭವಾಗಿ, ರನ್ನ,ಪಂಪರಿಂದ ಹಿಡಿದು, 8 ಜನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರನ್ನು ಹೊಂದಿರುವ ದೇಶದ ಏಕೈಕ ಭಾಷೆ ನಮ್ಮ ಕನ್ನಡ ಎಂಬುದು ನಮಗೆ ಹೆಮ್ಮೆಯ ವಿಷಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಹೇಳಿದ್ದಾರೆ.

ಇಂದು ಏಲಕ್ಕಿ ನಾಡು ಹಾವೇರಿಯಲ್ಲಿ86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, ಕನ್ನಡ ಅತ್ಯಂತ ಶ್ರೀಮಂತ ಭಾಷೆಯಾಗಿದ್ದು, ಇದಕ್ಕೆ ಆಪತ್ತು ತರುವ ಯಾವುದೇ ಶಕ್ತಿ ವಿಶ್ವದಲ್ಲಿ ಇನ್ನೂ ಹುಟ್ಟಿಲ್ಲ ಮತ್ತು ಹುಟ್ಟುವುದೂ ಇಲ್ಲ ಎಂದು ಹೇಳಿದರು.

ಇಡೀ ದೇಶದಲ್ಲಿ ಕನ್ನಡಕ್ಕೆ ಮಾತ್ರ ಎಂಟು ಜ್ಞಾನಪೀಠ ಪ್ರಶಸ್ತಿಗಳು ದೊರೆತಿವೆ. ದೇಶದ ಬೇರೆ ಯಾವ ಭಾಷೆಗೂ ಸಹ ಇಷ್ಟು ಜ್ಞಾನಪೀಠ ಪ್ರಶಸ್ತಿಗಳು ದೊರೆತಿಲ್ಲ. ಒಂದು ಭಾಷೆ ಒಂದು ಸಂಸ್ಕೃತಿ ಬೆಳೆಯಬೇಕಂದರೇ ಇದುವರೆಗೆ ನಡೆದ ಬಂದ ದಾರಿಯ ಸಿಂಹಾವಲೋಕನ ಮಾಡಬೇಕಾಗುತ್ತದೆ. ಆಗ ಅದು ಮುಂದಿನ ದಾರಿಯನ್ನು ನಿರ್ಧರಿಸುತ್ತದೆ ಎಂದರು.

ಇಬ್ಬರು ಸರಸ್ವತಿ ಸಮ್ಮಾನ್ ಪುರಸ್ಕೃತರು ಸಹ ನಮ್ಮ ಕನ್ನಡ ನಾಡಿನಲ್ಲಿರುವುದು ವಿಶೇಷವಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಕನ್ನಡ ಇಡೀ ಜಗತ್ತಿನಲ್ಲಿಅತ್ಯಂತ ಪ್ರಾಚೀನ ಭಾಷೆ. ಇದರರ್ಥ ಕನ್ನಡಿಗರ ಬದುಕು ಪುರಾತನ ಹಾಗೂ ಶ್ರೇಷ್ಠ. ಜಗತ್ತಿನಲ್ಲಿ ಕನ್ನಡ ಸಂಸ್ಕೃತಿ ಅತ್ಯಂತ ಪವಿತ್ರ ಮತ್ತು ಪುರಾತನ. ಇಂಥ ಕನ್ನಡದ ಕಂಪು ಭಾರತದಲ್ಲಿ ಮತ್ತೆ ಹೆಮ್ಮರವಾಗಿ ಬೆಳೆಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

SCROLL FOR NEXT