ರಾಜ್ಯ

ಬೆಂಗಳೂರು: ನಾಲ್ಕು ಗಂಟೆಗಳ ಅಂತರದಲ್ಲಿ ನಾಲ್ವರು ಮಹಿಳೆಯರನ್ನು ಟಾರ್ಗೆಟ್ ಮಾಡಿ ಸರಗಳ್ಳತನ

Ramyashree GN

ಬೆಂಗಳೂರು: ನಗರದ ಉತ್ತರ ವಿಭಾಗದಲ್ಲಿ ಶುಕ್ರವಾರ ಬೆಳಗ್ಗೆ ಎರಡು ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ನಾಲ್ಕು ಗಂಟೆಗಳ ಅಂತರದಲ್ಲಿ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ನಾಲ್ಕೂ ಘಟನೆಗಳಲ್ಲಿ ಮಹಿಳೆಯರನ್ನೇ ಗುರಿಯಾಗಿಸಿಕೊಂಡಿದ್ದಾರೆ.

ಬಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು, ಯಶವಂತಪುರ ಮತ್ತು ಪೀಣ್ಯ ಠಾಣೆಗಳಲ್ಲಿ ತಲಾ ಒಂದು ಘಟನೆ ವರದಿಯಾಗಿದೆ. ಮುಂಜಾನೆ 5.30ರ ಸುಮಾರಿಗೆ ಎಂಇಐ ಲೇಔಟ್‌ನ ಸರ್ವಮಂಗಳದಲ್ಲಿ ದುಷ್ಕರ್ಮಿಗಳು ಮೊದಲು ಮಹಿಳೆಯೊಬ್ಬರ 60 ಗ್ರಾಂ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ರಾಮಯ್ಯ ಲೇಔಟ್‌ನಲ್ಲಿ 7.30 ರ ಸುಮಾರಿಗೆ ಪ್ರಿಯಾಲಕ್ಷ್ಮಿ ಎಂಬುವವರಿಂದ 80 ಗ್ರಾಂ ಚಿನ್ನದ ಸರದೊಂದಿಗೆ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಎರಡೂ ಘಟನೆಗಳು ಬಗಲಗುಂಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೆಳಗ್ಗೆ 8 ಗಂಟೆ ಸುಮಾರಿಗೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಚೊಕ್ಕಸಂದ್ರದಲ್ಲಿ ಲಲಿತಮ್ಮ ಎಂಬುವವರ 45 ಗ್ರಾಂ ತೂಕದ ಚಿನ್ನದ ಸರ ಕಸಿದುಕೊಂಡ ದುಷ್ಕರ್ಮಿಗಳು, ಯಶವಂತಪುರ ಪೊಲೀಸ್ ವ್ಯಾಪ್ತಿಯ ಜೆಪಿ ಪಾರ್ಕ್ ಬಳಿ 9 ಗಂಟೆ ಸುಮಾರಿಗೆ ಜಯಪ್ರಭಾ ಅವರ 50 ಗ್ರಾಂ ಸರ ದೋಚಿದ್ದಾರೆ.

ಘಟನೆ ನಂತರ, ಪಿಕೆಟ್ ಪಾಯಿಂಟ್‌ಗಳನ್ನು ಸ್ಥಾಪಿಸಿದ್ದು, ಅನುಮಾನದ ಮೇಲೆ ವಾಹನಗಳನ್ನು ಪರಿಶೀಲಿಸಲಾಗಿದೆ. ಆದರೆ, ದುಷ್ಕರ್ಮಿಗಳು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

'ಎಲ್ಲಾ ನಾಲ್ಕು ಪ್ರಕರಣಗಳಲ್ಲಿ ಇಬ್ಬರು ವ್ಯಕ್ತಿಗಳು ಭಾಗಿಯಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ ಮತ್ತು ಲಭ್ಯವಿರುವ ಸುಳಿವುಗಳ ಆಧಾರದ ಮೇಲೆ ನಾವು ಶಂಕಿತರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದೇವೆ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

SCROLL FOR NEXT