ರಾಜ್ಯ

ತಮ್ಮ ಶ್ವಾನವನ್ನು ಕಚ್ಚಿದ್ದಕ್ಕಾಗಿ ನೆರೆಹೊರೆಯ ನಾಯಿಯನ್ನು ಶೂಟ್ ಮಾಡಿ ಕೊಂದ ಇಬ್ಬರ ಬಂಧನ!

Ramyashree GN

ಬೆಂಗಳೂರು: ಮಾಗಡಿ ಮುಖ್ಯರಸ್ತೆಯಲ್ಲಿ ನಗರದ ಹೊರವಲಯದಲ್ಲಿ ತಮ್ಮ ನಾಯಿಯನ್ನು ಕಚ್ಚಿದ್ದಕ್ಕೆ ಇಬ್ಬರು ಇನ್ನೊಂದು ನಾಯಿಯನ್ನು ಗುಂಡಿಕ್ಕಿ ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ. ಇಂಡಿ ತಳಿಯ ನಾಯಿಯ ಮಾಲೀಕ ಕಾಳಯ್ಯ ಈ ಸಂಬಂಧ ಇಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ.

ಮಾಗಡಿ ತಾಲೂಕಿನ ಬಸವನಪಾಳ್ಯದಲ್ಲಿ ಮಂಗಳವಾರ ರಾತ್ರಿ 7.30ರಿಂದ 7.35ರ ನಡುವೆ ಈ ಘಟನೆ ನಡೆದಿದೆ. ದೂರುದಾರರ ನಾಯಿಯು ಆರೋಪಿಗಳಲ್ಲಿ ಒಬ್ಬನ ನಾಯಿಯನ್ನು ಕಚ್ಚಿದೆ ಎಂದು ಹೇಳಲಾಗಿದೆ. ಇದು ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.

ಇಬ್ಬರಿಗೂ ಪರಿಚಯವಿರುವ ವ್ಯಕ್ತಿಗಳ ಮಧ್ಯಪ್ರವೇಶದ ನಂತರ ಸಮಸ್ಯೆ ಇತ್ಯರ್ಥವಾಗಿದೆ. ಆದರೆ, ಆರೋಪಿಗಳು ನಾಯಿಗೆ ತಕ್ಕ ಪಾಠ ಕಲಿಸಬೇಕೆಂದುಕೊಂಡಿದ್ದಾರೆ. ಪ್ರಮುಖ ಆರೋಪಿ ಹನುಮಂತಯ್ಯ (38), ತಮ್ಮ ಸ್ನೇಹಿತ ಮತ್ತು ದೇಶ ನಿರ್ಮಿತ ಬಂದೂಕನ್ನು ಹೊಂದಿದ್ದ ಮಂಜುನಾಥ್ (32) ಎಂಬುವವರನ್ನು ಸಂಪರ್ಕಿಸಿದ್ದಾರೆ. ನಂತರ ಆರೋಪಿಗಳಿಬ್ಬರು ನಾಯಿಯನ್ನು ಗುಂಡಿಕ್ಕಿ ಕೊಂದಿದ್ದಾರೆ.

ಆರೋಪಿಗಳಿಬ್ಬರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹನುಮಂತಯ್ಯ ಮತ್ತು ಮಂಜುನಾಥ್ ಅವರನ್ನು ಬುಧವಾರ ಬಂಧಿಸಲಾಗಿದ್ದು, ಜೈಲಿಗೆ ಕಳುಹಿಸಲಾಗಿದೆ. ನಾಯಿಯನ್ನು ಕೊಲ್ಲಲು ಬಳಸಿದ ಬಂದೂಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೃತ ನಾಯಿ ಮೂರು ವರ್ಷದ ದೇಶೀಯ ಗಂಡು ನಾಯಿ. ಸಮಸ್ಯೆ ಕ್ಷುಲ್ಲಕವಾಗಿತ್ತು. ಗುಂಡಿನ ಸದ್ದು ಕೇಳಿದ ನಂತರ ನಾನು ಮನೆಯಿಂದ ಹೊರಗೆ ಧಾವಿಸಿ ನೋಡಿದಾಗ ನನ್ನ ನಾಯಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿದೆ. ತಕ್ಷಣ ಪೊಲೀಸರಿಗೆ ಕರೆ ಮಾಡಿದೆ. ನಾನು ಆರೋಪಿಗಳೊಂದಿಗೆ ಜಗಳವಾಡಿದ್ದರಿಂದ, ಅವರು ನನಗೆ ಕೂಡ ಗುಂಡು ಹಾರಿಸಬಹುದೆಂದು ಭಾವಿಸಿ ನಾನು ತುಂಬಾ ಭಯಭೀತಗೊಂಡಿದ್ದೆ. ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಕಾಳಯ್ಯ ಟಿಎನ್‌ಐಇಗೆ ತಿಳಿಸಿದ್ದಾರೆ.

ಪ್ರಮುಖ ಆರೋಪಿ ಹನುಮಂತಯ್ಯ, ಕೃಷಿಕನಾಗಿದ್ದು, ದೂರುದಾರರ ಮನೆಯಿಂದ ಕೇವಲ 350 ಮೀ. ದೂರದಲ್ಲಿ ವಾಸಿಸುತ್ತಿದ್ದರು.

ಆರೋಪಿ ಬಳಿ ನಾಯಿಯೂ ಇದೆ. ನಾಯಿ ಕಚ್ಚಿದ ಘಟನೆ ನಡೆಯುವವರೆಗೂ ನಮಗೆ ಯಾವುದೇ ಸಮಸ್ಯೆ ಇರಲಿಲ್ಲ. ದೇಶೀಯ ನಿರ್ಮಿತ ಬಂದೂಕು ಮಂಜುನಾಥ್ ಅವರದ್ದು ಎಂದು ನನಗೆ ತಿಳಿಯಿತು ಎಂದು ಅವರು ಹೇಳಿದರು.

'ಆರೋಪಿಯು ಬಂದೂಕನ್ನು ಬೇಟೆಗೆ ಬಳಸುತ್ತಿದ್ದ. ಗನ್ ಇಟ್ಟುಕೊಳ್ಳಲು ಪರವಾನಿಗೆ ಹೊಂದಿದ್ದಾರಾ ಎಂಬುದನ್ನು ಪರಿಶೀಲಿಸುತ್ತಿದ್ದೇವೆ’ ಎಂದು ಕುದೂರು ಪೊಲೀಸರು ತಿಳಿಸಿದರು.

SCROLL FOR NEXT