ರಾಜ್ಯ

ದೇವಸ್ಥಾನಗಳಲ್ಲಿ ಗಂಟೆ ಕಳ್ಳತನ ಪ್ರಕರಣ: ಕೊಡಗು ಪೊಲೀಸರಿಂದ ನಾಲ್ವರ ಬಂಧನ

Lingaraj Badiger

ಮಡಿಕೇರಿ: ಜಿಲ್ಲೆಯಾದ್ಯಂತ ದೇವಸ್ಥಾನಗಳಲ್ಲಿ ಗಂಟೆ ಕಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಕೊಡಗು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಲೋಹದ ದೇವಸ್ಥಾನದ ಗಂಟೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಗಳನ್ನು ಮೈಸೂರಿನ ಕೆಸರೆ ನಿವಾಸಿಗಳಾದ ಅಮ್ಜದ್ ಅಹಮದ್(37), ಸಮೀವುಲ್ಲಾ ಅಲಿಯಾಸ್ ಸಮಿ(22), ಜುಲ್ಫಿಕರ್ ಅಲಿಯಾಸ್ ಜುಲ್ಲು(36) ಮತ್ತು ಹೈದರ್(36) ಎಂದು ಗುರುತಿಸಲಾಗಿದೆ.

2022ರ ಫೆಬ್ರವರಿಯಿಂದ ಅಕ್ಟೋಬರ್ ವರೆಗೆ, ಕೊಡಗಿನಾದ್ಯಂತ ಹಲವಾರು ಪ್ರಸಿದ್ಧ ದೇವಾಲಯಗಳಲ್ಲಿ ದೇವಾಲಯದ ಘಂಟೆಗಳ ಕಳ್ಳತನ ಪ್ರಕರಣಗಳು ವರದಿಯಾಗಿದ್ದವು. ಜಿಲ್ಲೆಯಾದ್ಯಂತ ಎಂಟು ವಿವಿಧ ದೇವಸ್ಥಾನಗಳಿಂದ 800 ಕಿಲೋಗೂ ಹೆಚ್ಚು ಲೋಹದ ಗಂಟೆಗಳು ಕಳ್ಳತನವಾಗಿದ್ದು, ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು.

ಕೊನೆಗೆ ಕೊಡಗು ಎಸ್ಪಿ ಎಂ.ಎ.ಅಯ್ಯಪ್ಪ ನೇತೃತ್ವದಲ್ಲಿ ಪ್ರಕರಣದ ಜಾಡು ಹಿಡಿಯಲು ವಿಶೇಷ ತಂಡಗಳನ್ನು ರಚಿಸಲಾಯಿತು ಮತ್ತು ಪ್ರಕರಣದ ಬಗ್ಗೆ ಮೂರು ತಿಂಗಳ ಕಾಲ ತನಿಖೆ ನಡೆಸಲಾಗಿದೆ. ಪೊಲೀಸರು ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮತ್ತು ಮೈಸೂರಿನ ಪ್ರದೇಶಗಳಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಎಲ್ಲಾ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

SCROLL FOR NEXT