ರಾಜ್ಯ

ಬೆಂಗಳೂರು: ಪ್ರಮುಖ ರಸ್ತೆಗಳಲ್ಲಿ 'ಮೆಕ್ಯಾನಿಕಲ್ ಸ್ವೀಪರ್‌' ಬಳಕೆಗೆ ಬಿಬಿಎಂಪಿ ಮುಂದು!

Manjula VN

ಬೆಂಗಳೂರು: ನಗರದ ಏರ್‌ಪೋರ್ಟ್‌ ರಸ್ತೆ ಹಾಗೂ ಇತರೆ ಅಧಿಕ ಸಂಚಾರ ದಟ್ಟಣೆ ಇರುವ ರಸ್ತೆಗಳಲ್ಲಿ ಮೆಕ್ಯಾನಿಕಲ್ ಸ್ವೀಪರ್‌'ಗಳ ಬಳಕೆ ಮಾಡಲು ಬಿಬಿಎಂಪಿ ಮುಂದಾಗಿದೆ.

ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರಲಿದ್ದು, ಇಂತರ ರಸ್ತೆಗಳಲ್ಲಿ ಅಪಘಾತ ಸಂಖ್ಯೆ ಕೂಡ ಹೆಚ್ಚಾಗಿರುತ್ತವೆ. ಈ ಹಿನ್ನೆಲೆಯಲ್ಲಿ ಪೌರ ಕಾರ್ಮಿಕರ ರಕ್ಷಣೆ ಮಾಡಲು ಮುಂದಾಗಿರುವ ಬಿಬಿಎಂಪಿ, ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳಲ್ಲಿ ಮೆಕ್ಯಾನಿಕಲ್ ಸ್ವೀಪರ್‌ಗಳನ್ನು ನಿಯೋಜಿಸಲು ಮುಂದಾಗಿದೆ.

ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣಾ ವಿಭಾಗದ ಮುಖ್ಯ ಎಂಜಿನಿಯರ್ ಬಸವರಾಜ ಕಬಾಡೆ ಮಾತನಾಡಿ, ಸುಲಭವಾಗಿ ನಿಯಂತ್ರಿಸಬಲ್ಲ ಯಂತ್ರಗಳು ಇದಾಗಿದ್ದು, ಇದರ ತೂಕ 30 ಕೆಜಿ ಇರಲಿದೆ. ಯಂತ್ರದ ಕೆಳಭಾಗದಲ್ಲಿ ಟ್ರಾಲಿ ಮಾದರಿ ಚಕ್ರಗಳನ್ನು ಅಳವಡಿಸಲಾಗಿರುತ್ತದೆ. ಹೀಗಾಗಿ ಯಂತ್ರವನ್ನು ಸ್ಟಾರ್ಟ್‌ ಮಾಡಿದ ಕೂಡಲೇ ತನ್ನಿಂದ ತಾನೇ ರಸ್ತೆಯಲ್ಲಿ ಸಾಗಲಿದೆ. ಅದರಿಂದ ಪೌರಕಾರ್ಮಿಕರು ಯಂತ್ರವನ್ನು ವಾರ್ಡ್‌ ಕಚೇರಿಗೆ ತರುವುದು ಮತ್ತು ತೆಗೆದುಕೊಂಡು ಹೋಗುವುದು ಸುಲಭವಾಗಲಿದೆ. ಯಂತ್ರಗಳ ಬಳಕೆಗೆ ಪೌರಕಾರ್ಮಿಕರಿಗೆ ತರಬೇತಿಯನ್ನೂ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಪೌರಕಾರ್ಮಿಕರು ಈ ಕಸಗುಡಿಸುವ ಯಂತ್ರವನ್ನು ಬಳಸಬಹುದು, ಕೆಲಸ ಪ್ರಾರಂಭಿಸಲು ಕೇವಲ ಒಂದು ಬಟನ್ ಒತ್ತುವ ಅಗತ್ಯವಿರುತ್ತದೆ. ಈಗಾಗಲೇ ಕೆಲವೆಡೆ ಯಂತ್ರಗಳನ್ನು ಬಳಕೆ ಮಾಡಲಾಗುತ್ತಿದೆ, ಈ ಬಗ್ಗೆ ಪೌರಕಾರ್ಮಿಕರು ತಮ್ಮ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. ಪಾಲಿಕೆಯು ಆರಂಭದಲ್ಲಿ 815 'ಮ್ಯಾನುಯಲ್ ಪುಶ್ ಆಪರೇಟಿವ್ ಸ್ವೀಪಿಂಗ್ ಮೆಷಿನ್'ಗಳನ್ನು ಖರೀದಿಸಲಿದ್ದು, ಇದಕ್ಕೆ 3.30 ಕೋಟಿ ರೂ ವೆಚ್ಚವಾಗಲಿದೆ ಎಂದು ತಿಳಿಸಿದ್ದಾರೆ.

“ಬೆಂಗಳೂರಿನ 13,000 ಕಿಮೀ ಉದ್ದದ ರಸ್ತೆಯಲ್ಲಿ, 1,400 ಕಿಮೀ ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳಿವೆ, ಉಳಿದವು ವಾರ್ಡ್'ಗೆ ಸೇರಿದ ರಸ್ತೆಗಳಾಗಿವೆ. ಭಾರೀ ದಟ್ಟಣೆ ಮತ್ತು ವೇಗದ ವಾಹನಗಳಿಂದ ಇಂತಹ ರಸ್ತೆಗಳಲ್ಲಿ ಕಸ ಗುಡಿಸುವುದು ಸವಾಲಿನ ಕೆಲಸವಾಗಿರುತ್ತದೆ. ಹೀಗಾಗಿ ಈ ರಸ್ತೆಗಳಲ್ಲಿ ಯಂತ್ರಗಳನ್ನು ನಿಯೋಜಿಸಲಾಗುತ್ತಿದೆ. ಪಾಲಿಕೆ ಈಗಾಗಲೇ ಟೆಂಡರ್ ಕರೆದಿದ್ದು, ನಾಲ್ಕು ತಿಂಗಳೊಳಗೆ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದ್ದಾರೆ.

SCROLL FOR NEXT