ರಾಜ್ಯ

ಮಂಗಳೂರು: ಉದ್ಯಮಿ ಮನೆ ಮೇಲೆ ಇಡಿ ದಾಳಿ, 17 ಕೋಟಿ ರೂ. ಮೌಲ್ಯದ ಆಸ್ತಿ ವಶ

Manjula VN

ಬೆಂಗಳೂರು: ಮಂಗಳೂರಿನಲ್ಲಿ ಉದ್ಯಮಿಯೊಬ್ಬರ ಮನೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದು, ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆ ಹಿನ್ನೆಲೆಯಲ್ಲಿ ಮುಕ್ಕ ಗ್ರೂಪ್ ಆಫ್ ಕಂಪೆನೀಸ್ ನ ಮೊಹಮ್ಮದ್ ಹ್ಯಾರಿಸ್ ಅವರ ಹೆಸರಿನಲ್ಲಿದ್ದ 17.34 ಕೋ.ರೂ. ಮೌಲ್ಯದ ಸ್ಥಿರಾಸ್ತಿಗಳನ್ನು ವಶಪಡಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.

ಮಂಗಳೂರಿನ ಕೆ ಮೊಹಮ್ಮದ್ ಹ್ಯಾರಿಸ್ ಅವರ 17.34 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಗಳನ್ನು ವಶಪಡಿಸಿಕೊಂಡಿರುವುದನ್ನು ಸಕ್ಷಮ ಪ್ರಾಧಿಕಾರ (ಸಿಎ) ಜನವರಿ 6 ರಂದು ತನ್ನ ಆದೇಶದಲ್ಲಿ ದೃಢಪಡಿಸಿದೆ.

ಆದಾಯ ತೆರಿಗೆ (ಐ-ಟಿ) ಇಲಾಖೆಯಿಂದ ಪಡೆದ ಮಾಹಿತಿಯ ಆಧಾರದ ಮೇಲೆ ಕೇಂದ್ರೀಯ ಸಂಸ್ಥೆ ಪ್ರಕರಣದ ಆರಂಭಿಸಿತ್ತು. "ತನಿಖೆಯ ಸಂದರ್ಭದಲ್ಲಿ, ಹ್ಯಾರಿಸ್ ಅವರು ಯುಎಇಯಲ್ಲಿ ಫ್ಲಾಟ್‌ನ್ನು ಸ್ವಾಧೀನಪಡಿಸಿಕೊಂಡಿರುವುದು, ವಿದೇಶಿ ಬ್ಯಾಂಕ್ ಖಾತೆಗಳನ್ನು ಹೊಂದಿರುವುದು ಮತ್ತು ಯುಎಇಯಲ್ಲಿ ವಿದೇಶಿ ವ್ಯಾಪಾರ ಘಟಕದಲ್ಲಿ ಹೂಡಿಕೆ ಹೊಂದಿರುವುದು ಕಂಡು ಬಂದಿತ್ತು. ಅದರ ಒಟ್ಟು ಆಸ್ತಿ ಭಾರತೀಯ ಲೆಕ್ಕಾಚಾರದ ಪ್ರಕಾರ 17.34 ಕೋಟಿ ರು. ಆಗಿದೆ. ಇದು, ಫೆಮಾ ಕಾಯ್ದೆಯ ಸೆ. 4ರ ಅನ್ವಯ ಕಾನೂನು ಉಲ್ಲಂಘನೆಯಾಗಿದೆ. ಕಾಯ್ದೆ ಪ್ರಕಾರ ವಿದೇಶದಲ್ಲಿ ಮಾಡಿದ ನಿಯಮ ಉಲ್ಲಂಘನೆಯ ಮೊತ್ತದ ಆಸ್ತಿಯನ್ನು ಭಾರತದೊಳಗೆ ವಶಪಡಿಸಿಕೊಳ್ಳಲು ಇಡಿಗೆ ಅಧಿಕಾರವಿದೆ. ಹಾಗಾಗಿ ಈ ದಾಳಿ ನಡೆದಿದೆ ಎಂದು ತಿಳಿಸಿದೆ.

ಮಂಗಳೂರಿನಲ್ಲಿರುವ ಎರಡು ಫ್ಲ್ಯಾಟ್ ಗಳು ಮತ್ತು ಒಂದು ಕೈಗಾರಿಕಾ ನಿವೇಶನವನ್ನು ವಶಪಡಿಸಿಕೊಳ್ಳಲಾಗಿದ್ದು, ‘ಫೆಮಾ’ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಇಡಿ ಹೇಳಿದೆ.

SCROLL FOR NEXT