ರಾಜ್ಯ

ಕೊಡಗು: ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ 33 ಅಡಿ ಮೇಲಿನಿಂದ ಬಿದ್ದು ಕಾಡಾನೆ ಸಾವು

Srinivas Rao BV

ಕೊಡಗು: ಕೊಡಗು ಜಿಲ್ಲೆಯಲ್ಲಿ ಸೆರೆ ಹಿಡಿಯುವ ಕಾರ್ಯಾಚರಣೆಯ ವೇಳೆ ಕಾಡಾನೆಯೊಂದು ಮೃತಪಟ್ಟಿದೆ.

ಅಟ್ಟೂರು-ನಲ್ಲೂರು ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಸುಮಾರು 20 ವರ್ಷದ ಗಂಡು ಕಾಡಾನೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಕೈಗೊಂಡಿದ್ದರು. ಮೃತ ಕಾಡಾನೆಯನ್ನು 2020 ರಲ್ಲಿ ಈ ಪ್ರದೇಶದಲ್ಲಿ ಮಹಿಳೆಯೊಬ್ಬರನ್ನು ಕೊಂದಿದ್ದ ಕಾಡಾನೆಯೇ ಇರಬೇಕು ಎಂದು ಹೇಳಲಾಗುತ್ತಿದೆ. 

ಶುಕ್ರವಾರದಂದು ಬೆಳಿಗ್ಗೆ 40 ಅರಣ್ಯಾಧಿಕಾರಿಗಳು 6 ಪಳಗಿದ ಆನೆಗಳೊಂದಿಗೆ ಕಾಡಾನೆಯನ್ನು ಸೆರೆಹಿಡಿಯುವ ಕಾರ್ಯಾಚರಣೆ ಆರಂಭಿಸಿದ್ದರು. 

ಗ್ರಾಮದಲ್ಲಿನ ಮುತ್ತಣ್ಣ ಎಂಬುವವರ ಎಸ್ಟೇಟ್ ನಲ್ಲಿ ಆನೆ ಕಂಡುಬಂದಿತ್ತು. ಅರಣ್ಯ ಪಶುವೈದ್ಯರಾದ ರಮೇಶ್ ಹಾಗೂ ಚಿತ್ತಿಯಪ್ಪ ಅವರುಗಳು ಆನೆಯನ್ನು ಶಾಂತಗೊಳಿಸಲು ಯತ್ನಿಸಿದರು, ಮಂಪರು ಬರುವ ಮದ್ದು ನೀಡಿದ ಬಳಿಕ 50 ಮೀಟರ್ ಓಡಿದ ಆನೆ ಕೊನೆಗೆ ಕಾಫಿ ಒಣಗಿಸುವ ಪ್ರದೇಶಕ್ಕೆ 33 ಅಡಿ ಮೇಲಿನಿಂದ ಬಿದ್ದಿತ್ತು. ಈ ಬಳಿಕವೂ ಆನೆ ತಪ್ಪಿಸಿಕೊಳ್ಳಲು ಯತ್ನಿಸಿತ್ತು.  ಅರಣ್ಯಾಧಿಕಾರಿಗಳು ಆನೆಯ ಕತ್ತು ಹಾಗೂ ಕಾಲುಗಳಿಗೆ ಹಗ್ಗಗಳನ್ನು ಬಿಗಿದು ನಿಯಂತ್ರಿಸಲು ಯತ್ನಿಸಿದರಾದರೂ ಕುಸಿದುಬಿದ್ದು ಕೊನೆಯುಸಿರೆಳೆದಿದೆ. 30 ಅಡಿಗಳಿಂದ ಕೆಳಗೆ ಬಿದ್ದ ಆನೆಗೆ ಆಂತರಿಕವಾಗಿ ತೀವ್ರ ಗಾಯಗಳಾಗಿತ್ತು, ಎಡಭಾಗದ ಕಣ್ಣು ಕಾಣುತ್ತಿರಲಿಲ್ಲ ಎಂದು ತಿಳಿದುಬಂದಿದೆ.

ಮರಣೋತ್ತರ ಪರೀಕ್ಷೆ ಬಳಿಕ ಆನೆಯ ದೇಹವನ್ನು  ನೀರುಕೊಲ್ಲಿ ಅರಣ್ಯ ಮಿತಿಯಲ್ಲಿ ಹಾಕಲಾಗುತ್ತದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಇತ್ತೀಹಿನ ದಿನಗಳಲ್ಲಿ ನಡೆಯುತ್ತಿರುವ 2 ನೇ ಘಟನೆ ಇದಾಗಿದೆ. 
 

SCROLL FOR NEXT