ರಾಜ್ಯ

ವಿದ್ಯುತ್ ಕಳ್ಳತನ; 2.59 ಕೋಟಿ ರೂ. ದಂಡ ವಿಧಿಸಿ ಶಾಕ್ ನೀಡಿದ ಬೆಸ್ಕಾಂ

Manjula VN

ಬೆಂಗಳೂರು: ವಿದ್ಯುತ್ ಕಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಬೆಸ್ಕಾಂನ ಜಾಗೃತ ದಳ ಕಳೆದ 4 ತಿಂಗಳಲ್ಲಿ 10,908 ವಿದ್ಯುತ್ ಸ್ಥಾವರಗಳ ತಪಾಸಣೆ ಮಾಡಿ ತಪ್ಪಿತಸ್ಥ ಗ್ರಾಹಕರಿಗೆ 2.59 ಕೋಟಿ ರೂ. ದಂಡ ವಿಧಿಸಿದೆ.

2022ರ ಸೆಪ್ಟೆಂಬರ್ ನಿಂದ ಡಿಸೆಂಬರ್ ತಿಂಗಳವರೆಗೆ ಒಟ್ಟು 1781 ಪ್ರಕರಣಗಳನ್ನು ಜಾಗೃತ ದಳ ದಾಖಲಿಸಿಕೊಂಡು ಅದರಲ್ಲಿ 1,721 ಪ್ರಕರಣಗಳನ್ನು ಇತ್ಯರ್ಥಗೊಳಿಸಿದೆ ಎಂದು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಮಾಹಿತಿ ನೀಡಿದ್ದಾರೆ.

ಅದೇ ರೀತಿ ಬಾಕಿ ವಿದ್ಯುತ್ ಬಿಲ್ ವಸೂಲಿಗೆ ಬೆಸ್ಕಾಂ ಕ್ರಮಗೊಂಡಿದ್ದು, ಕಳೆದ 3 ತಿಂಗಳಲ್ಲಿ ಬಾಕಿ ಇದ್ದ 1,417.45 ಕೋಟಿ ರೂ. ನಲ್ಲಿ 358.3 ಕೋಟಿ ರೂ. ಬಿಲ್ ಮೊತ್ತವನ್ನು ಸಂಗ್ರಹಿಸಿದೆ. ಬಿಲ್ ಪಾವತಿಸದ ಸುಮಾರು 23 ಲಕ್ಷ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ ಎಂದು ವಿವರಿಸಿದ್ದಾರೆ.

ಬೆಸ್ಕಾಂ ನ ಮಾಪಕ ವಿಭಾಗದ ಸಿಬ್ಬಂದಿಗಳು ಸೆಪ್ಟೆಂಬರ್ ನಿಂದ ನವೆಂಬರ್ ತಿಂಗಳವರೆಗೆ 2373 ವಿದ್ಯುತ್ ಮೀಟರ್ ಗಳ ಪರಿಶೀಲನೆ ಮಾಡಿದ್ದು, ಜಕಾತಿ ದುರ್ಬಳಕೆ, ಅಧಿಕ ಲೋಡ್  ಮುಂತಾದ ಪ್ರಕರಣಗಳಲ್ಲಿ ಸುಮಾರು 7 ಕೋಟಿ ರೂ. ದಂಡ ವಿಧಿಸಿ 5 ಕೋಟಿ ರೂ. ಗಳನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.

ಬೆಸ್ಕಾಂನ  ಕ್ಷೇತ್ರ ಸಿಬ್ಬಂದಿಗಳು 4,784 ವಿದ್ಯುತ್ ದುರುಪಯೋಗ ಪ್ರಕರಣಗಳನ್ನು ದಾಖಲಿಸಿಕೊಂಡು ತಪ್ಪಿತಸ್ಥರಿಗೆ 6.5 ಕೋಟಿ ರೂ. ದಂಡ ವಿಧಿಸುವುದರೊಂದಿಗೆ 3.9 ಕೋಟಿ ರೂ. ವಸೂಲಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

SCROLL FOR NEXT