ರಾಜ್ಯ

ಬಸ್ ನಿಲ್ಲಿಸುವ ವಿಚಾರಕ್ಕೆ ಜಗಳ: ಚಾಲಕನ ಹತ್ಯೆಗೈದ ಮತ್ತೊಬ್ಬ ಚಾಲಕ

Manjula VN

ಬೆಂಗಳೂರು: ರಸ್ತೆ ಬದಿ ರಾತ್ರಿ ಬಸ್ ನಿಲ್ಲಿಸುವ ವಿಚಾರಕ್ಕೆ ಉಂಟಾದ ಜಗಳದಲ್ಲಿ ಖಾಸಗಿ ಬಸ್ ಚಾಲಕನ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಹತ್ಯೆಗೈದು ಪರಾರಿಯಾಗಿದ್ದ ಮತ್ತೊಬ್ಬ ಚಾಲಕನನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಸುಂಕದಕಟ್ಟೆ ನಿವಾಸಿ ಸಿ.ವೆಂಕಟಸ್ವಾಮಿ (52) ಹತ್ಯೆಯಾದ ದುರ್ದೇವಿ. ಕೃತ್ಯ ಎಸಗಿ ಪರಾರಿಯಾಗಿದ್ದ ಮಾಗಡಿ ರಸ್ತೆಯ ಕೊಡಿಗೇಹಳ್ಳಿಯ ವೆಂಕಟೇಶ್ ನನ್ನು ಬಂಧಿಸಲಾಗಿದೆ.

ಸುಂಕದಕಟ್ಟೆ ಸಮೀಪ ಚರಂಡಿಯಲ್ಲಿ ಜ.13ರಂದು ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದರು. ಇದರ ಆಧಾರದ ಮೇರೆಗೆ ಮೃತರ ಗುರುತು ಪತ್ತೆ ಹಚ್ಚಿ, ಹಂತಕನನ್ನು ಬಂಧನಕ್ಕೊಳಪಡಿಸಿದ್ದಾರೆ.

ಖಾಸಗಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ವೆಂಕಟಸ್ವಾಮಿಯವರು ಮಾಗಡಿ ರಸ್ತೆಯ ಜಿಟಿ ಇಂಡಸ್ಟ್ರಿಯಲ್ ಕಾಂಪ್ಲೆಕ್ಸ್ ಬಳಿ ನಿತ್ಯ ಬಸ್ ನಿಲ್ಲಿಸುತ್ತಿದ್ದರು. ಜನವರಿ 12ರ ರಾತ್ರಿ ಕೂಡ ಬಸ್ ನಿಲ್ಲಿಸಲು ಹೋದಾಗ ಅದೇ ಸ್ಥಳದಲ್ಲಿ ಮತ್ತೊಂದು ಬಸ್ ನಿಲ್ಲಿಸಲಾಗಿತ್ತು. ಚಾಲಕ ವೆಂಕಟೇಶ್ ಬಸ್ ಒಳಗೆ ಮಲಗಿದ್ದರುವುದು ಕಂಡು ಬಂದಿತ್ತು. ಈ ವೇಳೆ ವೆಂಕಟಸ್ವಾಮಿ ಬಸ್ಸಿನ ಗಾಜಿಗೆ ಕಲ್ಲು ಎಸೆದು ಜಗಳಕ್ಕಿಳಿದಿದ್ದರು. ಇದರಿಂದ ಕೆರಳಿದ ವೆಂಕಟೇಶ್ ವೆಂಕಟಸ್ವಾಮಿಗೆ ಮನಬಂದಂತೆ ಥಳಿಸಿ, ಹತ್ಯೆ ಮಾಡಿದ್ದಾನೆ. ಬಳಿಕ ಶವನನ್ನು ಬಸ್ ನಲ್ಲಿ ಸಾಗಿಸಿ ಚರಂಡಿಗೆ ಎಸೆದು, ಪಾರ್ಕಿಂಗ್ ಸ್ಥಳದಲ್ಲಿ ಮರಳಿ ಬಸ್ ನಿಲ್ಲಿಸಿ ಎಂದಿನಂತೆ ಮರುದಿನ ತಮ್ಮ ಕರ್ತವ್ಯಕ್ಕೆ ಹಾಜರಾಗಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೂರು ಕೊಲೆ ಪ್ರಕರಣ ಭೇಧಿಸಿದ ಪಶ್ಚಿಮ ವಿಭಾಗದ ಪೊಲೀಸರು
ಬಸ ಚಾಲಕನ ಪ್ರಕರಣ ಸೇರಿದಂತೆ ಕಳೆದ ವಾರ ಪಶ್ಚಿಮ ವಿಭಾಗದ ಪೊಲೀಸರು ಮೂರು ಕೊಲೆ ಪ್ರಕರಣಗಳನ್ನು ಭೇದಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಸೋದರ ಮಾವ ಸತೀಶ್ ನನ್ನು ಹತ್ಯೆ ಮಾಡಿದ್ದ ಗೂಡ್ಸ್ ಆಟೋ ಚಾಲಕ ವೆಂಕಟೇಶ್ (32) ಎಂಬಾತನನ್ನು ಕೆಂಗೇರಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಆರೋಪಿ ವೆಂಕಟೇಶ್, ಸತೀಶ್ ಸಹೋದರಿಯನ್ನು ಮದುವೆಯಾಗಿದ್ದ. ಸತೀಶ್ ಆಗಾಗ ವೆಂಕಟೇಶ್ ಮನೆಗೆ ಭೇಟಿ ನೀಡುತ್ತಿದ್ದು, ವೆಂಕಟೇಶ್ ತಂಗಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ಸಂಬಂಧ ಆಕೆಯ ಪತಿಗೆ ತಿಳಿದಾಗ, ಆತ ಆಕೆಯಿಂದ ದೂರಾಗಿದ್ದ. ಈ ವಿಚಾರ ಸಂಬಂಧ ಸತೀಶ್ ಹಾಗೂ ವೆಂಕಟೇಶ್ ನಡುವೆ ಆಗಾಗ ಜಗಳವಾಗುತ್ತಿತ್ತು. ಸಹೋದರಿಯನ್ನು ಭೇಟಿಯಾಗದಂತೆ ಎಚ್ಚರಿಕೆಯನ್ನೂ ನೀಡಿದ್ದ.

ವೆಂಕಟೇಶ್ ಸಹೋದರಿ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ತೆರಳಿದ ಸತೀಶ್ ಜಗಳವಾಡಿದ್ದ. ಈ ವಿಚಾರ ತಿಳಿದ ವೆಂಕಟೇಶ್ ಸತೀಶ್ ಜೊತೆಗೆ ಮಾತನಾಡಬೇಕೆಂದು ಹೇಳಿ ಆತನನ್ನು ವಿಶ್ವೇಶ್ವರಯ್ಯ ಲೇಔಟ್‌ನ ಧನನಾಯಕನಹಳ್ಳಿಗೆ ಕರೆದೊಯ್ದಿದ್ದಾನೆ. ಬಳಿಕ ಛತ್ರಿಯಿಂದ ಸತೀಶ್ ಮೇಲೆ ಹಲ್ಲೆ ನಡೆಸಿ, ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆಂದು ಪೊಲೀಸರು ಹೇಳಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಪೈಂಟರ್ ಜಗದೀಶ್ (32)ನನ್ನು ಕೊಲೆ ಮಾಡಿದ ಆರೋಪದ ಮೇಲೆ ದೀಪಾಂಜಲಿ ನಗರದ ನಿವಾಸಿ ಹೇಮಂತ್ (24) ಎಂಬಾತನನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಜಗದೀಶ್ ಹಾಗೂ ಹೇಮಂತ್ ನಡುವೆ ಜಗಳವಾಗಿದೆ. ಈ ವೇಳೆ ಹೇಮಂತ್ ಜಗದೀಶ್'ಗೆ ಕಪಾಳಮೋಕ್ಷ ಮಾಡಿದ್ದು, ಕಳೆಗೆ ಬಿದ್ದ ಜಗದೀಶ್ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದೆ, ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆಂದು ತಿಳಿದುಬಂದಿದೆ.

SCROLL FOR NEXT