ರಾಜ್ಯ

ಕನ್ನಡಪ್ರಭ.ಕಾಮ್ ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ ಅವರ ಷೇರು ಮಾರುಕಟ್ಟೆ- ಹೂಡಿಕೆ ಮಾರ್ಗದರ್ಶಿ ಬಿಡುಗಡೆ

Srinivas Rao BV

ಬೆಂಗಳೂರು: ಕನ್ನಡಪ್ರಭ.ಕಾಮ್ ನ ಹಣಕ್ಲಾಸು ಅಂಕಣಕಾರ, ಖ್ಯಾತ ಆರ್ಥಿಕ ತಜ್ಞ ರಂಗಸ್ವಾಮಿ ಮೂಕನಹಳ್ಳಿ ಅವರ ನೂತನ ಪುಸ್ತಕ ಷೇರು ಮಾರುಕಟ್ಟೆ- ಸಮಗ್ರ ಹೂಡಿಕೆ ಮಾರ್ಗದರ್ಶಿ ಪುಸ್ತಕ ಇಂದು ನಗರದ ವಾಡಿಯಾ ಸಭಾಂಗಣದಲ್ಲಿ ಬಿಡುಗಡೆಯಾಯಿತು. 

ಸಾವಣ್ಣ ಪ್ರಕಾಶನ ಸಂಸ್ಥೆ ಷೇರು ಮಾರುಕಟ್ಟೆ ಪುಸ್ತಕವನ್ನು ಪ್ರಕಟಿಸಿದ್ದು, ಏಮ್ ಹೈ ಕನ್ಸಲ್ಟಿಂಗ್ ಸಿಇಒ ಎನ್ ರವಿಶಂಕರ್, ವಿಸ್ತಾರ ನ್ಯೂಸ್ ಸಿಇಒ, ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಪುಸ್ತಕ ಬಿಡುಗಡೆ ಮಾಡಿದರು. 

ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಏಮ್ ಹೈ ಕನ್ಸಲ್ಟಿಂಗ್ ಸಿಇಒ ಎನ್ ರವಿಶಂಕರ್, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಆದಾಯ ಗಳಿಸುವುದಕ್ಕೆ ನಿರ್ದಿಷ್ಟವಾದ ಒಂದೇ ಸಲಹೆ ಎಂಬುದಿಲ್ಲ. ಇಲ್ಲಿ ವೈರುಧ್ಯಗಳಿಂದಲೂ ಆದಾಯ ಗಳಿಸಿದ ಉದಾಹರಣೆಗಳಿವೆ, ಆದರೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆಗೆ ಮುನ್ನ ಸಾಕಷ್ಟು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ನಿರಂತರ ಕಲಿಕೆಯಿಂದ ಮಾತ್ರ ಷೇರು ಮಾರುಕಟ್ಟೆಯಲ್ಲಿ ಲಾಭ ಗಳಿಸಲು ಸಾಧ್ಯ. ಷೇರು ಜಗತ್ತಿನ ಬಗ್ಗೆ ಆದಾಯ ಗಳಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ರಂಗಸ್ವಾಮಿಯವರ ಈ ಕೃತಿ ಅತ್ಯಂತ ಉಪಯುಕ್ತವಾಗಿದೆ ಎಂದು ಹೇಳಿದರು. 

ವಿಸ್ತಾರ ನ್ಯೂಸ್ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಮಾತನಾಡಿ, ರಂಗಸ್ವಾಮಿ ಅವರು ಮೂಲತಃ ಚಾರ್ಟೆಡ್ ಅಕೌಂಟೆಂಟ್ ಆಗಿದ್ದರೂ, ದೇಶ ಸುತ್ತು ಕೋಶ ಓದು ಎಂಬ ಮಾತನ್ನು ಕೃತಿಯಲ್ಲಿ ಜಾರಿಗೆ ತಂದು ಹಲವಾರು ದೇಶಗಳಲ್ಲಿದ್ದು ಅನುಭವದ ಮೂಲಕ ಈ ಕೃತಿಯನ್ನು ಹೊರತಂದಿದ್ದಾರೆ. ನಾವು ಭಾರತ ವಿಶ್ವಗುರು ಆಗಬೇಕು ಎಂದು ಬಯಸುತ್ತಿದ್ದೇವೆ. ದೇಶ ಸ್ವಾತಂತ್ರ್ಯ ಪಡೆದ ಬಳಿಕ ಆಹಾರ, ಶಸ್ತ್ರಾಸ್ತ್ರಗಳ ಕೊರತೆ ಎದುರಿಸಿತ್ತು ಹಸಿರು ಕ್ರಾಂತಿ ಮೂಲಕ ಆಹಾರದ ಕೊರತೆಯಿಂದ ಮುಕ್ತಿ ಪಡೆಯಿತು. ಈಗ ಆಹಾರ, ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುವ ಹಂತಕ್ಕೆ ಮುಂದುವರೆದಿದೆ. ಅಂತೆಯೇ ಈಗ ಹಣಕಾಸು ವಿಚಾರದಲ್ಲಿ ಸಾಕ್ಷರತೆ ಸಾಧಿಸಬೇಕಾದ ಅವಶ್ಯತೆ ಇದ್ದು ಈ ಮೂಲಕ ಉದ್ಯೋಗ ಸೃಷ್ಟಿಗೆ ಅವಕಾಶವಾಗುವ ಉದ್ಯಮಶೀಲತೆ ಬೆಳವಣಿಗೆಗೂ ಪ್ರೋತ್ಸಾಹ ನೀಡಬೇಕಿದೆ. ಈ ದೃಷ್ಟಿಯಿಂದ ರಂಗಸ್ವಾಮಿ ಮೂಕನಹಳ್ಳಿ ಅವರ ಷೇರು ಮಾರುಕಟ್ಟೆ ಕೃತಿ ಅತ್ಯಂತ ಸಹಕಾರಿಯಾಗಿದೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ನಡೆದ ಸಂವಾದದಲ್ಲಿ ಉದ್ಯಮ ಸಲಹೆಗಾರರಾದ ನವೀನ್ ಕಟ್ಟಿ, ಸಿಎ ರಾಜೇಶ್ ಸತ್ರಸಾಲ, ಎನ್ ರವಿಶಂಕರ್, ರಂಗಸ್ವಾಮಿ ಮೂಕನಹಳ್ಳಿ ಅವರು ಓದುಗರ ಪ್ರಶ್ನೆಗಳಿಗೆ ಉತ್ತರ ನೀಡಿದರು. ಷೇರು ಮಾರುಕಟ್ಟೆಯಲ್ಲಿನ ವಹಿವಾಟುಗಳು ಹೇಗೆ ನಡೆಯುತ್ತವೆ, ಅದರ ಮೂಲಕ ಲಾಭಗಳಿಸಲು ಅಗತ್ಯವಿರುವ ತಯಾರಿಗಳ ಬಗ್ಗೆ ಪುಸ್ತಕದಲ್ಲಿ ವಿಶ್ಲೇಷಿಸಲಾಗಿದೆ. 

SCROLL FOR NEXT