ರಾಜ್ಯ

ಬೆಂಗಳೂರು: ರೈಲಿನಲ್ಲಿ ಕೊಳಾಯಿ ಇತರ ಪರಿಕರಗಳ ಕದಿಯುತ್ತಿದ್ದ ದುಷ್ಕರ್ಮಿಗಳ ಬಂಧನ

Manjula VN

ಬೆಂಗಳೂರು: ಬೆಂಗಳೂರು ರೈಲುಗಳಲ್ಲಿ ಕೊಳಾಯಿ ಸೇರಿದಂತೆ ಇತರೆ ಪರಿಕರಗಳ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರು ವಿಭಾಗದ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಶುಕ್ರವಾರ ಬಂಧನಕ್ಕೊಳಪಡಿಸಿದೆ.

ಬಂಧಿತರನ್ನು ರಂಗಸ್ವಾಮಿ (47) ಹಾಗೂ ಗಾಂಧಿ (29) ಎಂದು ಗುರ್ತಿಸಲಾಗಿದೆ. ಆರೋಪಿಗಳು ನಗರದ  ಶ್ರೀರಾಮಪುರದ ನಿವಾಸಿಗಳಾಗಿದ್ದು, ಇಬ್ಬರೂ ಬೆಂಗಳೂರು-ಚೆನ್ನೈ ಮತ್ತು ಬೆಂಗಳೂರು-ಧರ್ಮಾವರಂ ರೈಲುಗಳಲ್ಲಿ ನಲ್ಲಿ ಸೇರಿದಂತೆ ಇತರ ಪರಿಕರಗಳನ್ನು ಕದಿಯುತ್ತಿದ್ದರು. ರೈಲುಗಳಲ್ಲಿನ ವಸ್ತುಗಳು ನಾಪತ್ತೆಯಾಗುತ್ತಿರುವುದು ಆಗಾಗ್ಗೆ ವರದಿಯಾಗುತ್ತಿದ್ದವು.

ಈ ಹಿನ್ನೆಲೆಯಲ್ಲಿ ಕಳ್ಳರ ಪತ್ತೆಗೆ ಭದ್ರತಾ ಆಯುಕ್ತರಾದ ಶ್ರೀ ದೇವಾಂಶ್ ಶುಕ್ಲಾ ಅವರು ವಿಶೇಷ ತಂಡವನ್ನು ರಚಿಸಿದ್ದರು.

ಇದರಂತೆ ಮಂಡ್ಯದ ಆರ್‌ಪಿಎಫ್ ನಿರೀಕ್ಷಕ ಶ್ರೀ ಎ.ಕೆ. ತಿವಾರಿ, ನೇತೃತ್ವದ ತಂಡವು ಕೆಎಸ್ಆರ್ ನಿಲ್ದಾಣದಲ್ಲಿ ಆರೋಪಿ ರಂಗಸ್ವಾಮಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದೆ. ಬಳಿಕ ಈತ ನೀಡಿದ ಮಾಹಿತಿ ಮೇರೆಗೆ ಮತ್ತೋರ್ವ ಆರೋಪಿ ಗಾಂಧಿ ಎಂಬಾತನನ್ನೂ ಬಂಧನಕ್ಕೊಳಪಡಿಸಿದ್ದಾರೆ.

ಇಬ್ಬರ ಬಂಧನದ ಬಳಿಕ ಅಧಿಕಾರಿಗಳುಳು,  ರೂ.12960 ಮೌಲ್ಯದ ನಲ್ಲಿಗಳು ಮತ್ತು ಇತರೆ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ನಡುವೆ ಆರೋಪಿಗಳ ಬಂಧಿಸುವಲ್ಲಿ ಯಶಸ್ವಿಯಾದ ಆರ್‌ಪಿಎಫ್ ತಂಡವನ್ನು ಬೆಂಗಳೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ರೀ ಶ್ಯಾಮ್ ಸಿಂಗ್ ಅವರು ಶ್ಲಾಘಿಸಿದ್ದಾರೆ.

SCROLL FOR NEXT