ರಾಜ್ಯ

ಶಾಲಾ ಮಕ್ಕಳಿಗೆ ಬ್ಯಾಗ್ ರಹಿತ ದಿನ: 'ಸಂಭ್ರಮ ಶನಿವಾರ' ಆಚರಣೆ ಕುರಿತು ಸರ್ಕಾರ ಸುತ್ತೋಲೆ!

Manjula VN

ಬೆಂಗಳೂರು: ಶಾಲಾ ಮಕ್ಕಳಿಗೆ ವಾರದಲ್ಲಿ ಒಂದು ದಿನ ಬ್ಯಾಗ್ ರಹಿತವಾಗಿ ಖುಷಿಯಿಂದ ಕಲಿಯುವ ವಾತಾವರಣ ನಿರ್ಮಿಸುವ ಉದ್ದೇಶದಿಂದ ರಾಜ್ಯದ ಶಾಲೆಗಳಲ್ಲಿ ಪ್ರತಿ ತಿಂಗಳ 3ನೇ ಶನಿವಾರವನ್ನು ‘ಬ್ಯಾಗ್ ರಹಿತ ದಿನ ಅಥವಾ ಸಂಭ್ರಮ ಶನಿವಾರ’ ಕಾರ್ಯಕ್ರಮ ನಡೆಸುವಂತೆ ಶಿಕ್ಷಣ ಇಲಾಖೆಯು ಸೂಚನೆ ನೀಡಿದೆ.

ಇತ್ತೀಚೆಗಷ್ಟೇ ಶಾಲಾ ಬ್ಯಾಗ್‌ತೂಕ ಇಳಿಸಿ ಆದೇಶ ಹೊರಡಿಸಿದ್ದ ಶಿಕ್ಷಣ ಇಲಾಖೆ, ಇದೀಗ ಸಂಭ್ರಮ ಶನಿವಾರ ಆದೇಶ ಹೊರಡಿಸಿದೆ.

ಮಕ್ಕಳಿಗೆ ಸಂತಸದಾಯಕ ಕಲಿಕೆಯನ್ನು ನೀಡಲು ಹಾಗೂ ಮಕ್ಕಳಿಗೆ ಪಠ್ಯವನ್ನು ಹೊರೆಯಾಗಿಸದೆ ಉಲ್ಲಾಸದಿಂದ ಕಲಿಯುವಂತೆ ಮಾಡುವ ಉದ್ದೇಶದಿಂದ ಪ್ರತಿ ತಿಂಗಳು ಒಂದು ಶನಿವಾರದಂದು ಬ್ಯಾಗ್ ರಹಿತ ದಿನವೆಂದು ಆಚರಿಸುವಂತೆ ಆದೇಶಿಸಲಾಗಿದೆ.

2023-24ನೇ ಸಾಲಿನಲ್ಲಿ ಪ್ರತಿ ತಿಂಗಳು 3ನೇ ಶನಿವಾರ ಶಾಲಾ ಹಂತದಲ್ಲಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತೆ ರಾಜ್ಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ಸೂಚನೆ ನೀಡಿದೆ.

ಮಕ್ಕಳನ್ನು ಬಹುಮುಖ ಚಟುವಟಿಕೆಗಳಲ್ಲಿ ತೊಡಗಿಸುವುದರ ಮೂಲಕ ನಾಗರಿಕ ಪ್ರಜ್ಞೆಯನ್ನು ಬೆಳೆಸಲು ವಿವಿಧ ವಿಷಯಗಳಲ್ಲಿ ವಿದ್ಯಾರ್ಥಿಗಳಿಗಾಗಿ 10 ಸ್ವಯಂ ವಿವರಣಾತ್ಮಕ ಮಾಡ್ಯೂಲ್‌ಗಳನ್ನು ಹಾಗೂ ಶಿಕ್ಷಕರಿಗೆ ಮಾರ್ಗದರ್ಶಿ ಕೈಪಿಡಿಯನ್ನು ಸಿದ್ಧಪಡಿಸಲಾಗಿದೆ. ಈ ಕುರಿತು ಜಿಲ್ಲಾ, ತಾಲ್ಲೂಕು ಹಾಗೂ ಕ್ಲಸ್ಟರ್ ಮಟ್ಟದಲ್ಲಿ ನಡೆಸಲಾಗುವ ಮುಖ್ಯ ಶಿಕ್ಷಕರು ಶಿಕ್ಷಕರ ಸಭೆಗಳಲ್ಲಿ ಅಗತ್ಯ ಮಾರ್ಗದರ್ಶನ ನೀಡುವಂತೆ ತಿಳಿಸಲಾಗಿದೆ.

ಸಂಭ್ರಮ ಶನಿವಾರ ದಂದು ಜಿಲ್ಲಾ ಹಂತ, ಬ್ಲಾಕ್ ಹಂತದ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಶಾಲೆಗಳಿಗೆ ಭೇಟಿ ನೀಡಿ ಅಗತ್ಯ ಮಾರ್ಗದರ್ಶನ ನೀಡುವಂತೆ ತಿಳಿಸಲಾಗಿದೆ.

2023-24ನೇ ಶೈಕ್ಷಣಿಕ ಸಾಲಿನ ‘ಸಂಭ್ರಮ ಶನಿವಾರ’ ಆಚರಣೆಗೆ ಸಂಬಂಧಿಸಿದ ಜಿಲ್ಲಾ ಹಂತದ ಕ್ರೋಡೀಕೃತ ವರದಿಯನ್ನು ಪ್ರತಿ ತಿಂಗಳು ಸಿದ್ಧಪಡಿಸಿ ಕಚೇರಿಗೆ ಕಳುಹಿಸಿಕೊಡುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

SCROLL FOR NEXT