ರಾಜ್ಯ

ನಿತ್ಯಾನಂದನ ಇಬ್ಬರು ಶಿಷ್ಯೆಯರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದ ನ್ಯಾಯಾಲಯ

Ramyashree GN

ರಾಮನಗರ: ಪರಾರಿಯಾಗಿರುವ ಕೈಲಾಸ ದೇಶದ ಸಂಸ್ಥಾಪಕ, ಬಿಡದಿ ಧ್ಯಾನಪೀಠದ ಮುಖ್ಯಸ್ಥ ನಿತ್ಯಾನಂದ ಸ್ವಾಮೀಜಿಯ ಇಬ್ಬರು ಶಿಷ್ಯರ ವಿರುದ್ಧ ಇಲ್ಲಿನ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಬುಧವಾರ ಜಾಮೀನು ರಹಿತ ವಾರಂಟ್ ಹೊರಡಿಸಿದೆ.

ಈ ಸಂಬಂಧ ರಾಮನಗರ ಜಿಲ್ಲಾ ನ್ಯಾಯಾಲಯವು ನಿತ್ಯಾನಂದನ ಶಿಷ್ಯರಾದ ಶಿವವಲ್ಲಭನೇನಿ ಮತ್ತು ಜಮುನಾ ರಾಣಿ ವಿರುದ್ಧ ವಾರಂಟ್ ಜಾರಿಯಾಗಿದೆ.

ಭಕ್ತೆಯೊಬ್ಬರ ಮೇಲೆ ನಿತ್ಯಾನಂದ ಸ್ವಾಮೀಜಿ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದಲ್ಲಿ ಅವರ ಇಬ್ಬರು ಅನುಯಾಯಿಗಳನ್ನು ಮೂರು ಮತ್ತು ಆರನೇ ಆರೋಪಿಗಳೆಂದು ಹೆಸರಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ನ ಎಲ್ಲಾ ತೀರ್ಪುಗಳನ್ನು ಪರಿಶೀಲಿಸಿದ ನಂತರ ನ್ಯಾಯಾಲಯವು ಈ ಆದೇಶವನ್ನು ನೀಡಿದೆ. ಈ ಇಬ್ಬರು ಆರೋಪಿಗಳು ವಿಚಾರಣೆಗಾಗಿ ನ್ಯಾಯಾಲಯದ ಎದುರು ಹಾಜರಾಗದೆ, ಕೋರ್ಟ್‌ನ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಆದೇಶ ನೀಡಿದೆ.

ಮುಂದಿನ ವಿಚಾರಣೆಯನ್ನು ಆಗಸ್ಟ್ 5ಕ್ಕೆ ಮುಂದೂಡಲಾಗಿದೆ. 2019ರಲ್ಲಿ ತನ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾದ ನಂತರ ನಿತ್ಯಾನಂದ ದೇಶ ಬಿಟ್ಟು ಪರಾರಿಯಾಗಿದ್ದಾರೆ.

ಈ ವರ್ಷದ ಆರಂಭದಲ್ಲಿ ಜಿನೆವಾದಲ್ಲಿ ನಡೆದ ವಿಶ್ವಸಂಸ್ಥೆಯ ಸಭೆಯಲ್ಲಿ ಅವರ ಶಿಷ್ಯೆ ವಿಜಯಪ್ರಿಯಾ ನಿತ್ಯಾನಂದ ಅವರು ಇತರ ಐದು ಮಹಿಳೆಯರೊಂದಿಗೆ ಅವರ ದೇಶ 'ಕೈಲಾಸ'ವನ್ನು ಪ್ರತಿನಿಧಿಸಿದರು.

SCROLL FOR NEXT