ರಾಜ್ಯ

ಹಾಲಿನ ದರ ಏರಿಕೆ ಕುರಿತು ಶೀಘ್ರ ನಿರ್ಧಾರ: ಸಚಿವ ಕೆ.ವೆಂಕಟೇಶ್

Nagaraja AB

ಬೆಂಗಳೂರು: ಹಾಲಿನ ದರ ಹೆಚ್ಚಳ ಪ್ರಸ್ತಾವನೆ ರಾಜ್ಯ ಸರ್ಕಾರದ ಮುಂದಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಮಂಗಳವಾರ ವಿಧಾನಪರಿಷತ್ತಿನಲ್ಲಿ ತಿಳಿಸಿದರು. ಕೆಎಂಎಫ್ ನ ನಂದಿನಿಯನ್ನು ಅಮುಲ್ ಜೊತೆ ವಿಲೀನ ಮಾಡುವ ಯಾವುದೇ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ರೈತರು ಮತ್ತು ಹಾಲು ಒಕ್ಕೂಟಗಳೆರಡೂ ಸಂಕಷ್ಟದಲ್ಲಿದ್ದು ಹಾಲಿನ ದರವನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ. ರೈತರು, ಹಾಲು ಒಕ್ಕೂಟಗಳು ಮತ್ತು ಗ್ರಾಹಕರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು, ಬೆಲೆಯನ್ನು ಹೆಚ್ಚಿಸಲಾಗುವುದು, ಹೆಚ್ಚಳದ ನಂತರ ಶೇ. 70ರಷ್ಟನ್ನು ರೈತರು ಮತ್ತು ಉಳಿದ ಹಾಲು ಒಕ್ಕೂಟಗಳಿಗೆ ನೀಡಲಾಗುವುದು ಎಂದು ಅವರು ಹೇಳಿದರು.

ಹಲವು ಖಾಸಗಿ ಕಂಪನಿಗಳು ರೈತರಿಂದ ಖರೀದಿಸುವ ಒಂದು ಲೀಟರ್ ಹಾಲಿಗೆ 2-3 ರೂಪಾಯಿ ನೀಡುತ್ತಿವೆ. ಇದು ಹಾಲು ಒಕ್ಕೂಟಗಳ ಮೇಲೆ ಪರಿಣಾಮ ಬೀರುತ್ತಿದ್ದು, ಆ ಕಂಪನಿಗಳನ್ನು ನಿಯಂತ್ರಿಸುವ ಮಾರ್ಗಗಳ ಬಗ್ಗೆ ಯೋಚಿಸುತ್ತಿದ್ದೇವೆ ಎಂದು ವೆಂಕಟೇಶ್ ಹೇಳಿದರು.

ಎಸ್‌ಸಿ ಮತ್ತು ಎಸ್‌ಟಿ ಸಮುದಾಯದ ರೈತರಿಗೆ ಏಪ್ರಿಲ್‌ವರೆಗೆ ಮತ್ತು ಇತರರಿಗೆ ಫೆಬ್ರವರಿವರೆಗೆ ಸಬ್ಸಿಡಿ ಬಾಕಿ ಪಾವತಿಸಲಾಗಿದೆ. ಬಾಕಿ ಹಣವನ್ನು  ಶೀಘ್ರದಲ್ಲಿಯೇ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. 

ಅಮೂಲ್‌ನೊಂದಿಗೆ ನಂದಿನಿ ವಿಲೀನಗೊಳಿಸುವ ಕ್ರಮ ಕುರಿತು ಜೆಡಿಎಸ್‌ನ ಎಂಎಲ್‌ಸಿಗಳಾದ ಎಸ್‌ಎಲ್‌ ಭೋಜೇಗೌಡ ಮತ್ತು ಕೆಎ ತಿಪ್ಪೇಸ್ವಾಮಿ ಪ್ರಸ್ತಾಪಿಸಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿಲೀನದ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಅಮುಲ್ ಆನ್‌ಲೈನ್‌ನಲ್ಲಿ ಕೇವಲ 1,000 ಲೀಟರ್ ಮಾತ್ರ ಮಾರಾಟ ಮಾಡುತ್ತಿದೆ. ಕಳೆದ ನವೆಂಬರ್‌ನಲ್ಲಿ ಕೆಎಂಎಫ್ ಹಾಲಿನ ದರವನ್ನು 2 ರೂಪಾಯಿ ಹೆಚ್ಚಿಸಿತ್ತು. ಆದರೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಅದನ್ನು ಸ್ಥಗಿತಗೊಳಿಸಿತ್ತು ಎಂದು ಅವರು ತಿಳಿಸಿದರು. 
 

SCROLL FOR NEXT