ರಾಜ್ಯ

ಬೆಂಗಳೂರು: ಹಾರ್ನ್ ಮಾಡಿದ್ದಕ್ಕೆ ಕಾರು ಚಾಲಕನ ಮೇಲೆ ಹಲ್ಲೆ; ಮೂವರು ಬೈಕ್ ಸವಾರರ ಬಂಧನ

Nagaraja AB

ಬೆಂಗಳೂರು: ರಸ್ತೆಯಲ್ಲಿ ಅಡ್ಡಾದಿಡ್ಡಿ ತೆರಳುತ್ತಿದ್ದವರಿಗೆ ಹಾರ್ನ್ ಮಾಡಿ ದಾರಿ ಕೇಳಿದ್ದಕ್ಕೆ ಕಾರನ್ನು ಅಡ್ಡಗಟ್ಟಿ ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ವರ್ತೂರು ಬಳಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಬೈಕ್ ಸವಾರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಲ್ಲೆಗೊಳಗಾದ ಯುವಕ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ. ನಮ್ಮ ಕಣ್ಗಾವಲಿನಲ್ಲಿ ಇಂತಹ ಗೂಂಡಾಗಿರಿಗೆ ಅವಕಾಶವಿರುವುದಿಲ್ಲ ಮತ್ತು ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. 

ಏನಿದು ಘಟನೆ: ವರ್ತೂರು ಬಳಿಯ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಬೈಕ್ ಚಾಲನೆ ಮಾಡುತ್ತಿದ್ದರಿಂದ ಮುಂದೆ ಸಾಗಲು ಆಗದ ಕಾರು ಚಾಲಕ ಹಾರ್ನ್ ಮಾಡಿದ್ದಾನೆ. ಇದೇ ಕಾರಣಕ್ಕೆ ಸಿಟ್ಟಾದ ಪುಂಡರ ಗುಂಪೊಂದು ಕಾರನ್ನು ಹಿಂಬಾಲಿಸಿ ಅಡ್ಡಗಟ್ಟಿ ಕಾರು ಚಾಲಕನ ಜೊತೆಗೆ ಜಗಳ ತೆಗೆದು ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ. ಇನ್ನೂ ಈ ಗ್ಯಾಂಗ್ ಗುಂಜೂರು ಗೇಟ್ ನ ಅಪಾರ್ಟ್ ಮೆಂಟ್ ಬಳಿಯಲ್ಲಿ ಚಾಲಕನ ಜೊತೆಗೆ ಗಲಾಟೆ ತೆಗೆದಿದ್ದು, ಆ ಬಳಿಕ ಕಾರಿನ ಗ್ಲಾಸ್ ಒಡೆದು ಚಾಲಕನ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಈ ಎಲ್ಲಾ ದೃಶ್ಯಗಳು ಕಾರು ಚಾಲಕನ ಮೊಬೈಲ್ ಹಾಗೂ ಅಪಾರ್ಟ್ ಮೆಂಟ್ ಬಳಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸಿಟಿಜನ್ಸ್ ಮೂವ್‌ಮೆಂಟ್, ಈಸ್ಟ್ ಬೆಂಗಳೂರು ಸಂಘಟನೆಗಳು ಈ ವಿಷಯವನ್ನು ಪೊಲೀಸರ ಗಮನಕ್ಕೆ ತಂದಿದ್ದವು. ಬೆಂಗಳೂರಿನಲ್ಲಿ ಏನಾಗುತ್ತಿದೆ? ಡಿಜಿಪಿ ರಜೆಯಲ್ಲಿದ್ದೀರಾ? ಬೆಂಗಳೂರಿನ ಐಟಿ ಹೃದಯಭಾಗದಲ್ಲಿ ಏನು ನಡೆಯುತ್ತಿದೆ ಎಂದು ಬೈಕ್‌ಗಳಲ್ಲಿ ಬಂದ ಗೂಂಡಾಗಳು ಹಾಡಹಗಲೇ ಐಟಿ ಉದ್ಯೋಗಿಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಇದು ಸಂಪೂರ್ಣ ಅಕ್ರಮವಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಸರ್, ಇದರಿಂದ ನೀವು ಬ್ರಾಂಡ್ ಬೆಂಗಳೂರು ಕಟ್ಟಲು ಸಾಧ್ಯವಿಲ್ಲ ಎಂದು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು.

ಭವಿಷ್ಯದಲ್ಲಿ ಇಂತಹ ಘಟನೆ ಕಂಡುಬಂದರೆ ಸಹಾಯವಾಣಿ 112 ಕರೆ ಮಾಡಿ ಎಂದು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

SCROLL FOR NEXT