ರಾಜ್ಯ

12 ಕೋಟಿ ರೂಪಾಯಿ ಮೌಲ್ಯದ ಗಾಂಜಾ ವಶಕ್ಕೆ: ಎಂಬಿಎ ಪದವೀಧರ ಸೇರಿ ಇಬ್ಬರು ಡ್ರಗ್ ಪೆಡ್ಲರ್ ಗಳ ಬಂಧನ!

Srinivas Rao BV

ಬೆಂಗಳೂರು: ಸಿಸಿಬಿಯ ಮಹಿಳಾ ಹಾಗೂ ನಾರ್ಕೊಟಿಕ್ಸ್ ಸ್ಕ್ವಾಡ್ ನ ಪೊಲೀಸ್ ಅಧಿಕಾರಿಗಳು ನಗರದಲ್ಲಿ ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ್ದು, ಓರ್ವ ಎಂಬಿಎ ಪದವೀಧರನೂ ಬಂಧನಕ್ಕೊಳಗಾಗಿದ್ದಾನೆ. 

ಬಂಧಿತರಿಂದ 1500 ಕೆ.ಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದ್ದು, ಇದರ ಮೌಲ್ಯ 12 ಕೋಟಿ ರೂಪಾಯಿಗಳೆಂದು ಹೇಳಲಾಗುತ್ತಿದೆ.  ಇ-ಕಾಮರ್ಸ್ ವೇದಿಕೆಗಳ ಮೂಲಕ ಪಾರ್ಸಲ್ ಮಾಡಿ ಡ್ರಗ್ ಗಳನ್ನು ಸಾಗಣೆ ಮಾಡಲಾಗುತ್ತಿತ್ತು. ಇದಷ್ಟೇ ಅಲ್ಲದೇ ಗೌಪ್ಯ ವಿಭಾಗವೊಂದನ್ನು ಸೃಷ್ಟಿಸಿ ಅದರಲ್ಲಿ ರಹಸ್ಯವಾಗಿ ಸಾಗಣೆ ಮಾಡಲಾಗುತ್ತಿತ್ತು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಆರೋಪಿಗಳನ್ನು ರಾಜಸ್ಥಾನ ಮೂಲದ ಎಂಬಿಎ ಪದವೀಧರ ಚಂದ್ರಬಾನು ಬಿಷ್ಣೋಯಿ ಆಂಧ್ರಪ್ರದೇಶ ಮೂಲದ ಬಿಎ ಪದವೀಧರ ಲಕ್ಷ್ಮಿ ಮೋಹನ್ ದಾಸ್ ಎಂದು ಗುರುತಿಸಲಾಗಿದೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಆರೋಪಿಗಳು ಸರಕು ಸಾಗಣೆ ವಾಹನಗಳಿಗೆ ಹಲವು ನೋಂದಣಿ ಸಂಖ್ಯೆಗಳನ್ನು ಬಳಕೆ ಮಾಡುತ್ತಿದ್ದರು. 

ಚಾಮರಾಜಪೇಟೆ ಪೊಲೀಸರು ಬಂಧಿಸಿರುವ ಮತ್ತೋರ್ವ ಮಾದಕ ದ್ರವ್ಯ ದಂಧೆಯಿಂದ ಇಬ್ಬರ ವಿವರ ಬಯಲಾಗಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂ ಬಳಿ ಮೂರು ವಾರಗಳಿಗೂ ಹೆಚ್ಚು ಕಾಲ ಬೀಡುಬಿಟ್ಟಿದ್ದ ಸಿಸಿಬಿ ಪೊಲೀಸರು ಇಬ್ಬರು ಅಂತಾರಾಜ್ಯ ಡ್ರಗ್ ದಂಧೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ.

SCROLL FOR NEXT