ರಾಜ್ಯ

ಆಫ್ರಿಕಾ ಖಂಡದ ರಾಷ್ಟ್ರಗಳನ್ನು ಜಿ20ಗೆ ಸೇರಿಸಲು ಪ್ರಧಾನಿ ಪ್ರಸ್ತಾವನೆ, ಸದಸ್ಯ ರಾಷ್ಟ್ರಗಳ ಮೆಚ್ಚುಗೆ: ಅಮಿತಾಭ್ ಕಾಂತ್

Ramyashree GN

ಹೊಸಪೇಟೆ: ಈ ಭಾರಿ ಜಿ20 ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಆಫ್ರಿಕಾ ಖಂಡದ ರಾಷ್ಟ್ರಗಳನ್ನು ಜಿ20ಗೆ ಸೇರಿಸಲು ಪ್ರಸ್ತಾಪಿಸಿದರು. ಹಂಪಿಯಲ್ಲಿ ನಡೆದಿರುವ ಮೂರನೇ ಶೆರ್ಪಾ ಸಭೆಯಲ್ಲಿ ಭಾರತದ ಪ್ರಸ್ತಾವನೆಗೆ ಎಲ್ಲಾ ಸದಸ್ಯ ರಾಷ್ಟ್ರಗಳು ಸಂಪೂರ್ಣವಾಗಿ ಬೆಂಬಲ ಸೂಚಿಸಿದವು ಎಂದು ಭಾರತೀಯ ನಿಯೋಗದ ಮುಖ್ಯಸ್ಥ (ಶೆರ್ಪಾ) ಅಮಿತಾಭ್ ಕಾಂತ್ ಶನಿವಾರ ಹೇಳಿದರು.

ಈಗಾಗಲೇ ಐರೋಪ್ಯ ಒಕ್ಕೂಟದ ರಾಷ್ಟ್ರಗಳು ಜಿ20 ಸದಸ್ಯ ರಾಷ್ಟ್ರಗಳಾಗಿವೆ. ಆಪ್ರಿಕಾ ಖಂಡದ ರಾಷ್ಟ್ರಗಳು ಸೇರ್ಪಡೆಯಾಗುವುದರಿಂದ ಜಿ20ಗೆ ಪ್ರಪಂಚದಲ್ಲಿನ ಅತಿಹೆಚ್ಚು ರಾಷ್ಟ್ರಗಳು ಸೇರ್ಪಡೆಯಾದಂತಾಗಿ ಇದು ಪ್ರಪಂಚದ ದೊಡ್ಡ ಆರ್ಥಿಕ ವೇದಿಕೆಯಾಗಲಿದೆ ಎಂದರು.

ಸೆ.9 ಮತ್ತು 10ರಂದು ದೆಹಲಿಯಲ್ಲಿ ನಡೆಯಲಿರುವ ಜಿ20 ನಾಯಕರ ಅಂತಿಮ ಸಭೆಯಲ್ಲಿ ಜಾರಿಯಾಗಲಿರುವ ಒಪ್ಪಂದದ ಸಂಪೂರ್ಣ ಕರಡು ಸಿದ್ಧಪಡಿಸುವಲ್ಲಿ ಹಂಪಿಯಲ್ಲಿ ನಡೆದ ಶೆರ್ಪಾ ಸಭೆ ಯಶಸ್ವಿಯಾಗಿದೆ. ಈ ಸಭೆಯಲ್ಲಿ ಭಾರತ ಹಲವು ಪ್ರಸ್ತಾವನೆಗಳನ್ನು ಜಿ20 ಮುಂದೆ ಇರಿಸಿದೆ. ಜಿ20 ಸದಸ್ಯ ರಾಷ್ಟ್ರಗಳು ಭಾರತ ರೂಪಿಸಿದ ಕರಡು ಪ್ರತಿಗೆ ರಚನಾತ್ಮಕ ಸಲಹೆ, ಸೂಚನೆ ನೀಡುವುದರೊಂದಿಗೆ ತಾತ್ವಿಕ ಒಪ್ಪಿಗೆ ಸೂಚಿಸಿವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಜಾಗತಿಕ ಕಾರ್ಯಸೂಚಿಗಳನ್ನು ರೂಪಿಸುವಲ್ಲಿ ಮತ್ತು ಸದ್ಯದ ಜಾಗತಿಕ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಈ ಪ್ರಸ್ತಾಪಗಳು ಪ್ರಮುಖವಾಗಿವೆ. ಭಾರತದ ಕ್ರಿಯಾತ್ಮಕ ಯೋಜನೆಗಳಿಗೆ ಸದಸ್ಯ ರಾಷ್ಟ್ರಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಹೇಳಿದರು.

ಹಿಂದಿನ ಜಿ20 ಶೃಂಗಸಭೆಗಳಲ್ಲಿ ಮಾಡಿಕೊಂಡ ಒಪ್ಪಂದಗಳಿಗಿಂತ ಭಾರತದಲ್ಲಿನ ಶೃಂಗಸಭೆಯ ಒಪ್ಪಂದದ ಅಂಶಗಳು ಹೆಚ್ಚು ಮಹತ್ವದ್ದಾಗಿದ್ದು, ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಆರ್ಥಿಕ ಪರಿವರ್ತನೆಗೆ ಕೊಡುಗೆ ನೀಡುತ್ತವೆ ಎಂದು ಅವರು ಹೇಳಿದರು.

ಮುಂದುವರಿಯುತ್ತಿರುವ ರಾಷ್ಟ್ರಗಳನ್ನು ಗಮನದಲ್ಲಿಟ್ಟುಕೊಂಡು ಆರ್ಥಿಕತೆಯ ಅಂತರ ಕಡಿಮೆ ಮಾಡುವುದು, ಅಂತರಾಷ್ಟ್ರೀಯ ಸಾಲ ಮರುಪಾವತಿ, ವಿವಿಧ ರಾಷ್ಟ್ರಗಳ ನಡುವಿನ ಹಣಕಾಸು ಸಂಸ್ಥೆಗಳ ಸ್ಥಾಪನೆ, ಸುಸ್ಥಿರ ಅಭಿವೃದ್ಧಿಗೆ ಆದ್ಯತೆ, ಮಾನವ ಕಲ್ಯಾಣ, ಅಂತರಾಷ್ಟ್ರೀಯ ವ್ಯವಹಾರ, ಸಾರ್ವಜನಿಕ ಮೂಲಕ ಸೌಕರ್ಯದ ಡಿಜಿಟಲೀಕರಣದೊಂದಿಗೆ ಆರ್ಥಿಕ ವ್ಯವಹಾರಗಳನ್ನು ಡಿಜಿಟಲೀಕರಣಗೊಳಿಸಿ ಆರ್ಥಿಕತೆಯ ಲಾಭ ಎಲ್ಲರಿಗೂ ತಲುವುವಂತೆ ಮಾಡುವುದು, ಹಸಿವು ಹಾಗೂ ಅಪೌಷ್ಟಿಕತೆ ನಿವಾರಣೆ, ಕೋವಿಡ್ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದವರಿಗೆ ಸಹಾಯ ಸೇರಿದಂತೆ ಬಡತನ ರೇಖೆಗಿಂತ ಕೆಳಗಿನ ಜನರನ್ನು ಮೇಲೆತ್ತುವ ಕ್ರಮಗಳ ಕುರಿತು ಶೆರ್ಪಾ ಸಭೆಗಳಲ್ಲಿ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.

SCROLL FOR NEXT