ರಾಜ್ಯ

ಕರ್ನಾಟಕ: 500 ಹಳೆಯ ಕೆಎಸ್ಆರ್‌ಟಿಸಿ ಬಸ್ಸುಗಳಿಗೆ ನವೀಕರಣ; ಹೊಸ ಅವತಾರ!

Ramyashree GN

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಹೊಸ ಬಸ್‌ಗಳನ್ನು ಖರೀದಿಸಿ ಸೇವೆಗೆ ನಿಯೋಜಿಸುವ ಯೋಜನೆ ಹೊಂದಿದ್ದರೂ, ಹಳೆಯ ಬಸ್ಸುಗಳಿಗೆ ಮರುಜೀವ ನೀಡಲು ಮುಂದಾಗಿದೆ. ನಿಗಮದ ಹಳೆಯ ಬಸ್‌ಗಳನ್ನು ನವೀಕರಿಸಲು ತನ್ನ ಬಸ್ ಡಿಪೋಗಳಿಗೆ ಜವಾಬ್ದಾರಿ ವಹಿಸಿದೆ. 

ಕೆಎಸ್‌ಆರ್‌ಟಿಸಿ ಎಂಡಿ ಅನ್ಬು ಕುಮಾರ್ ಟಿಎನ್‌ಐಇ ಜೊತೆಗೆ ಮಾತನಾಡಿ, 10 ಲಕ್ಷ ಕಿಮೀ ಕ್ರಮಿಸಿದ ಸುಮಾರು 500 ಬಸ್‌ಗಳನ್ನು ಈಗ ನವೀಕರಿಸಲಾಗಿದೆ. ಅವು ಈಗ ಹೊಚ್ಚಹೊಸ ಬಸ್‌ಗಳಾಗಿ ಕಾಣುತ್ತಿವೆ ಎಂದು ಹೇಳಿದ್ದಾರೆ.

'ಹೊಸ ಬಸ್‌ನ ಬೆಲೆ ಸುಮಾರು 40 ಲಕ್ಷ ರೂಪಾಯಿ. ಆದರೆ, ನಮ್ಮ ಸಿಬ್ಬಂದಿ ಕೇವಲ 3 ಲಕ್ಷ ರೂಪಾಯಿಗಳಿಗೆ ಹಳೆಯ ಬಸ್‌ಗಳನ್ನು ನವೀಕರಿಸುತ್ತಿದ್ದಾರೆ. ಬಸ್‌ಗಳಿಗೆ ಹೊಸ ಅವತಾರ ಸಿಕ್ಕಿದೆ. ಕೋವಿಡ್ ಸಮಯದಲ್ಲಿ ನಿಗಮವು ಭಾರಿ ನಷ್ಟವನ್ನು ಅನುಭವಿಸಿತು ಮತ್ತು ಈಗ ಚೇತರಿಸಿಕೊಳ್ಳುತ್ತಿದೆ. ಕೋವಿಡ್ ಪ್ರಭಾವದಿಂದಾಗಿ, ಕೆಎಸ್‌ಆರ್‌ಟಿಸಿಗೆ ಯಾವುದೇ ಹೊಸ ಬಸ್‌ಗಳನ್ನು ಖರೀದಿಸಲು ಸಾಧ್ಯವಾಗಲಿಲ್ಲ. ಹೀಗಾಗಿ, ಹಳೆಯ ಬಸ್‌ಗಳನ್ನು ನವೀಕರಿಸುವ ಮತ್ತು ಹೊಚ್ಚ ಹೊಸ ಅವತಾರದಲ್ಲಿ ಸೇವೆಗೆ ತರುವ ಆಲೋಚನೆಯು ಬಂದಿತು. ಸುಮಾರು ಒಂದು ವರ್ಷದಿಂದ, ನಾವು ಸುಮಾರು 500 ಹಳೆಯ ಬಸ್‌ಗಳನ್ನು ನವೀಕರಿಸಿದ್ದೇವೆ ಮತ್ತು ಪ್ರತಿ ವಾರ ಇದರ ಸಂಖ್ಯೆ ಜಾಸ್ತಿಯಾಗುತ್ತಿದೆ' ಎಂದು ಹೇಳಿದರು.

ನವೀಕರಣಕ್ಕಾಗಿ ಬಸ್‌ಗಳನ್ನು ಆಯ್ಕೆ ಮಾಡುವ ಮಾನದಂಡವನ್ನು ವಿವರಿಸಿದ ಕುಮಾರ್, 'ನಾವು ಸುಮಾರು 10 ವರ್ಷಗಳಷ್ಟು ಹಳೆಯದಾದ ಮತ್ತು 10 ಲಕ್ಷ ಕಿಮೀ ಅಥವಾ ಅದಕ್ಕಿಂತ ಹೆಚ್ಚು ಕ್ರಮಿಸಿದ ಬಸ್‌ಗಳನ್ನು ಆಯ್ಕೆ ಮಾಡುತ್ತೇವೆ. ಬಸ್ ಅನ್ನು ಆಯ್ಕೆ ಮಾಡಿದ ನಂತರ, ಚಾಸಿಸ್ ಹೊರತುಪಡಿಸಿ, ಅದನ್ನು ಸಂಪೂರ್ಣವಾಗಿ ಕಿತ್ತುಹಾಕಲಾಗುತ್ತದೆ. ಒಂದು ವೇಳೆ ಚಾಸಿಸ್ ಸವೆದು ಹೋಗಿದ್ದರೆ, ಅದನ್ನು ಕೂಡ ಸರಿಪಡಿಸಲಾಗುತ್ತದೆ. ಬಸ್‌ನ ಆಸನಗಳಿಂದ ಕಿಟಕಿಗಳವರೆಗೆ ಎಲ್ಲವನ್ನೂ ಬದಲಾಯಿಸಲಾಗುತ್ತದೆ. ಬಸ್‌ಗಳ ಹೊರಭಾಗವನ್ನು ಸಹ ಮರುನಿರ್ಮಾಣ ಮಾಡಲಾಗುತ್ತದೆ. ಇವುಗಳಿಗೆ ಬಣ್ಣ ಬಳಿದರೆ, ನವೀಕರಿಸಿದ ಬಸ್ ಹೊಚ್ಚಹೊಸ ಬಸ್‌ನಂತೆ ಉತ್ತಮವಾಗಿರುತ್ತದೆ ಎಂದರು.

ಹೆಚ್ಚಿನ ಬಸ್‌ಗಳಲ್ಲಿ ಎಂಜಿನ್ ಅದೇ ಆಗಿರುತ್ತದೆ ಮತ್ತು ಅಗತ್ಯವಿದ್ದರೆ ಅದನ್ನು ಕೂಡ ನವೀಕರಿಸಲಾಗುತ್ತದೆ. ಆದರೆ, ಬಸ್‌ಗಳು ರಸ್ತೆಗಿಳಿದು 15 ವರ್ಷ ಪೂರೈಸಿದ ನಂತರ ಅವುಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಈ ಮೂಲಕ ಬಸ್ ನಿಗಮಕ್ಕೆ ಕೋಟ್ಯಂತರ ರೂಪಾಯಿ ಉಳಿತಾಯ ಮಾಡಲು ಸಾಧ್ಯವಾಗಿದ್ದು, ಹಳೆಯ ಬಸ್‌ಗಳನ್ನು ನವೀಕರಿಸಲು ಬಸ್ ಡಿಪೋಗಳ ನಡುವೆ ಪೈಪೋಟಿ ನಡೆಯುತ್ತಿದೆ ಎಂದು ಕುಮಾರ್ ಹೇಳಿದರು.

SCROLL FOR NEXT