ರಾಜ್ಯ

ಕರ್ನಾಟಕ ವಿಧಾನಸಭೆ ಅಧಿವೇಶನದಿಂದ 10 ಬಿಜೆಪಿ ಶಾಸಕರ ಅಮಾನತು: ರಾಜ್ಯಪಾಲರ ಭೇಟಿ ಮಾಡಿದ ಸ್ಪೀಕರ್, ಉಪಸಭಾಪತಿ

Srinivasamurthy VN

ಬೆಂಗಳೂರು: ಕರ್ನಾಟಕ ವಿಧಾನಸಭೆ ಅಧಿವೇಶನದಿಂದ 10 ಬಿಜೆಪಿ ಶಾಸಕರ ಅಮಾನತುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೀಕರ್ ಯು ಟಿ ಖಾದರ್, ಉಪ ಸಭಾಪತಿ ರುದ್ರಪ್ಪ ಲಮಾಣಿ ಮತ್ತು ವಿಧಾನಸಭೆ ಕಾರ್ಯದರ್ಶಿ ಎಂ ಕೆ ವಿಶಾಲಾಕ್ಷಿ ಅವರು ಗುರುವಾರ ಕರ್ನಾಟಕ ರಾಜ್ಯಪಾಲರನ್ನು ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ರನ್ನು ಭೇಟಿ ಮಾಡಿದ ಸ್ಪೀಕರ್ ಯುಟಿ ಖಾದರ್ ಮತ್ತು ಉಪಸಭಾಪತಿ ರುದ್ರಪ್ಪ ಲಮಾಣಿ ಅವರು ಬಿಜೆಪಿ ಸದಸ್ಯರನ್ನು ಅಮಾನತುಗೊಳಿಸಲು ಕಾರಣವಾದ ಸಂದರ್ಭಗಳ ಬಗ್ಗೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಸದನದಲ್ಲಿ ಬಿಲ್‌ಗಳು ಮತ್ತು ಅಜೆಂಡಾ ದಾಖಲೆಗಳ ಪ್ರತಿಗಳನ್ನು ಹರಿದು ಅಧ್ಯಕ್ಷರ ಕಡೆಗೆ ಎಸೆದ ನಂತರ ಅವರ "ಅಸಭ್ಯ ಮತ್ತು ಅಗೌರವದ ನಡವಳಿಕೆ"ಗಾಗಿ ಅವರನ್ನು ಅಮಾನತುಗೊಳಿಸಲಾಯಿತು. ನಾಲ್ಕು ಮಾಜಿ ಸಚಿವರಾದ ಆರ್ ಅಶೋಕ, ಡಾ ಸಿ ಎನ್ ಅಶ್ವಥ್ ನಾರಾಯಣ, ವಿ ಸುನೀಲ್ ಕುಮಾರ್ ಮತ್ತು ಆರಗ ಜ್ಞಾನೇಂದ್ರ ಸೇರಿದಂತೆ 10 ಶಾಸಕರನ್ನು ಅಮಾನತುಗೊಳಿಸುವ ನಿರ್ಣಯವನ್ನು ವಿಧಾನಸಭೆ ಬುಧವಾರ ಅಂಗೀಕರಿಸಿದೆ. ಇನ್ನು ಸದಸ್ಯರನ್ನು ಅಮಾನತುಗೊಳಿಸಿರುವುದನ್ನು ವಿರೋಧಿಸಿ ಬಿಜೆಪಿ ಹಾಗೂ ಜೆಡಿಎಸ್ ಗುರುವಾರ ಕಲಾಪವನ್ನು ಬಹಿಷ್ಕರಿಸಿವೆ.

ಇಂದು ಬೆಳಗ್ಗೆ ಕಲಾಪ ಆರಂಭವಾದಾಗ ಪ್ರತಿಪಕ್ಷದಿಂದ ಜಿ ಜನಾರ್ಧನ ರೆಡ್ಡಿ (ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಮಾತ್ರ ಸದನದಲ್ಲಿ ಹಾಜರಿದ್ದರು.

ಇನ್ನು ಸದಸ್ಯರ ಅಮಾನತು ನಿರ್ಧಾರವನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ, ಸ್ಪೀಕರ್ ನಿರ್ಧಾರವನ್ನು ಅಸಂವಿಧಾನಿಕ ಎಂದು ಕರೆದಿದ್ದು, ಈ ಸಂಬಂಧ ಬಿಜೆಪಿ ಶಾಸಕರು ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ನಿನ್ನೆ ಇದೇ ಬಿಜೆಪಿ ಸದಸ್ಯರು ಜೆಡಿಎಸ್ ಬೆಂಬಲದೊಂದಿಗೆ ವಿಧಾನಸಭಾ ಕಾರ್ಯದರ್ಶಿಗೆ ಸ್ಪೀಕರ್ ವಿರುದ್ಧ ಅವಿಶ್ವಾಸ ನೋಟಿಸ್ ನೀಡಿದ್ದಾರೆ.

SCROLL FOR NEXT