ರಾಜ್ಯ

ಗೃಹಲಕ್ಷ್ಮಿ ಯೋಜನೆ: ಅರ್ಜಿ ಸಲ್ಲಿಕೆಗೆ ಹಣಕ್ಕಾಗಿ ಒತ್ತಾಯಿಸಿದಲ್ಲಿ ಕ್ರಿಮಿನಲ್ ಮೊಕದ್ದಮೆ- ಸಿಎಂ ಸಿದ್ದರಾಮಯ್ಯ

Nagaraja AB

ಹಾವೇರಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆಗೆ ಯಾರೊಬ್ಬರೂ ಹಣ ನೀಡುವ ಅಗತ್ಯವಿಲ್ಲ, ಈ ಪ್ರಕ್ರಿಯೆ ಸಂಪೂರ್ಣ ಉಚಿತವಾಗಿರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಅರ್ಜಿ ಸಲ್ಲಿಕೆಗಾಗಿ ಯಾರಾದರೂ ಹಣ ನೀಡುವಂತೆ ಒತ್ತಾಯಿಸಿದಲ್ಲಿ ಅಥವಾ ಹಣ ಪಡೆದ ಬಗ್ಗೆ ದೂರುಗಳು ಬಂದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. 

ಮಧ್ಯವರ್ತಿಗಳ ಹಾವಳಿಯಿಲ್ಲದೆ ಸರ್ಕಾರದ ಸೌಲಭ್ಯಗಳನ್ನು ನೇರವಾಗಿ ಜನರಿಗೆ ತಲುಪಿಸಬೇಕು, ಸರ್ಕಾರದ ಯೋಜನೆಗಳ ಗರಿಷ್ಠ ಲಾಭ ಫಲಾನುಭವಿಗಳಿಗೆ ಸಿಗಬೇಕು ಎಂಬುದು ನಮ್ಮ ಆಶಯವಾಗಿದೆ ಎಂದರು.

ನಂತರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ಸದ್ಯಕ್ಕೆ ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಸಾರ್ವಜನಿಕ ಸೇವಾ ಕೇಂದ್ರಗಳಲ್ಲಿ ನೋಂದಣಿ ಮಾಡಲಾಗುತ್ತಿದೆ. ಯೋಜನೆಯ ನೋಂದಣಿಗಾಗಿ ಪ್ರಜಾಪ್ರತಿನಿಧಿಗಳನ್ನು ಸರ್ಕಾರ ಶೀಘ್ರ ನೇಮಕ ಮಾಡಿಕೊಳ್ಳಲಿದೆ. ಬಳಿಕ ಪ್ರಜಾಪ್ರತಿನಿಧಿಗಳೇ ಮನೆ, ಮನೆಗಳಿಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಲಿದ್ದಾರೆ ಎಂದರು. 

ಅಗಸ್ಟ್ 1 ರಿಂದ ರಾಜ್ಯ ಬಜೆಟ್ ಅನುಷ್ಠಾನಕ್ಕೆ ಬರಕಿದ್ದು, 5 ಲಕ್ಷ ರೂಪಾಯಿಗಳವರೆಗೆ ಶೂನ್ಯ ಬಡ್ಡಿ ದರದಲ್ಲಿ ಹಾಗೂ 15 ಲಕ್ಷ ರೂಪಾಯಿಗಳವರೆಗೆ ಶೇ. 3 ರ ಬಡ್ಡಿ ದರದಲ್ಲಿ ರೈತರಿಗೆ ಸಾಲ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದರು. ಗೃಹಜ್ಯೋತಿ ಯೋಜನೆ ಮುಂದಿನ ತಿಂಗಳು 5 ರಂದು ಜಾರಿಗೆ ಬರಲಿದ್ದು, ಅಷ್ಟರಲ್ಲಿ ಎಲ್ಲ ಗ್ರಾಹಕರಿಂದ ಅರ್ಜಿ ಪಡೆದು ವಿದ್ಯುತ್ ಮೀಟರ್ ಗೆ ಆಧಾರ ಲಿಂಕ್ ಮಾಡಿಸಬೇಕು ಎಂದರು.

SCROLL FOR NEXT