ರಾಜ್ಯ

ಚಾಮರಾಜನಗರ: 9 ವರ್ಷದ ಬಾಲಕನ ಮೇಲೆ ಚಿರತೆ ದಾಳಿ, ಸ್ಥಿತಿ ಗಂಭೀರ

Manjula VN

ಬೆಂಗಳೂರು: ಚಾಮರಾಜನಗರ ಜಿಲ್ಲೆಯಲ್ಲಿ ಒಂಬತ್ತು ವರ್ಷದ ಬಾಲಕನ ಮೇಲೆ ಚಿರತೆಯೊಂದು ದಾಳಿ ನಡೆಸಿ, ಗಾಯಗೊಳಿಸಿರುವ ಘಟನೆ ಬುಧವಾರ ವರದಿಯಾಗಿದೆ.

ಯಳಂದೂರು ತಾಲೂಕಿನ ಮಲ್ಲಿಗೆಹಳ್ಳಿ ಗ್ರಾಮದ ಹರ್ಷಿತ್‌ ಚಿರತೆ ದಾಳಿಯಲ್ಲಿ ಗಾಯಗೊಂಡಿರುವ ಬಾಲಕನಾಗಿದ್ದಾನೆ. ಚಿರತೆ ದಾಳಿಯಿಂದಾಗಿ ಹರ್ಷಿತ್ ಮುಖ, ಕುತ್ತಿಗೆ, ಹೊಟ್ಟೆ ಮತ್ತು ಕಾಲುಗಳಿಗೆ ಗಾಯಗಳಾಗಿದ್ದು, ಬಾಲಕನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಗ್ರಾಮದ ಪ್ರಾಥಮಿಕ ಶಾಲೆಯ ಬಳಿ ಚಿರತೆ ಅಡಗಿ ಕುಳಿತಿತ್ತು. ಮಂಗಳವಾರ ಸಂಜೆ ಶಾಲೆಯಿಂದ ಬಾಲಕ ಮನೆಗೆ ತೆರಳುತ್ತಿದ್ದು, ಈ ವೇಳೆ ಚಿರತೆ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೂಡಲೇ ಗ್ರಾಮಸ್ಥರು ಬಾಲಕನ ರಕ್ಷಣೆಗೆ ಧಾವಿಸಿದ್ದು, ಜನರ ಕೂಗು ಕೇಳುತ್ತಿದ್ದಂತೆಯೇ ಭೀತಿಗೊಳಗಾದ ಚಿರತೆ ಬಾಲಕನನ್ನು ಬಿಟ್ಟು ಕೃಷಿ ಭೂಮಿಗೆ ನುಗ್ಗಿದೆ.

ಬಳಿಕ ಗಾಯಗೊಂಡ ಬಾಲಕನನ್ನು ಗ್ರಾಮಸ್ಥರು ಯಳಂದೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು, ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಜಿಲ್ಲಾಸ್ಪತ್ರೆಗೆ ಬಾಲಕನನ್ನು ದಾಖಲಿಸಲಾಗಿದೆ.

ಕಳೆದ ಮೂರು ದಿನಗಳಿಂದ ಈ ಪ್ರದೇಶದಲ್ಲಿ ಚಿರತೆ ಬೀಡು ಬಿಟ್ಟಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಕೆಸ್ತೂರು, ಮಲ್ಲಿಗೆಹಳ್ಳಿ, ಕಟ್ನವಾಡಿ, ಹೊಸೂರು ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಅರಣ್ಯಾಧಿಕಾರಿಗಳು ಕೂಡಲೇ ಚಿರತೆ ಸೆರೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಜೂನ್ 26 ರಂದು ಇದೇ ಪ್ರದೇಶದಲ್ಲಿ 6 ವರ್ಷದ ಬಾಲಕಿಯ ಮೇಲೆ ಚಿರತೆ ದಾಳಿ ನಡೆಸಿತ್ತು. ಬಾಲಕಿಯನ್ನು 200 ಮೀಟರ್ ವರೆಗೆ ಎಳೆದೊಯ್ದ ಚಿರತೆ, ಜನರ ಕೂಗು ಕೇಳಿ ಬಾಲಕಿಯನ್ನು ಬಿಟ್ಟು ಪರಾರಿಯಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಳು.

SCROLL FOR NEXT