ರಾಜ್ಯ

ಮೀಸಲಾತಿ ಕುರಿತು ಕೇಂದ್ರ ಸಚಿವರ ಹೇಳಿಕೆ ಬಿಜೆಪಿ ಬೂಟಾಟಿಕೆಯನ್ನು ಬಯಲು ಮಾಡಿದೆ: ಸಿಎಂ ಸಿದ್ದರಾಮಯ್ಯ

Manjula VN

ಬೆಂಗಳೂರು: 'ಸಂವಿಧಾನದಲ್ಲಿ ಒಳಮೀಸಲಾತಿಗೆ ಅವಕಾಶ ಇಲ್ಲ’ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯಸಚಿವ ನಾರಾಯಣ ಸ್ವಾಮಿಯವರು ರಾಜ್ಯಸಭೆಗೆ ತಿಳಿಸಿದ್ದು, ಕೇಂದ್ರ ಸಚಿವರ ಹೇಳಿಕೆ ಮೂಲಕ ಬಿಜೆಪಿಯ ಬೂಟಾಟಿಕೆ ಬಯಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು. ರಾಜ್ಯಸಭೆಯಲ್ಲಿ ಜಿವಿಎಲ್ ನರಸಿಂಹರಾವ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, "ಪ್ರಸ್ತುತ ಸಂವಿಧಾನದ ನಿಬಂಧನೆಗಳ ಅಡಿಯಲ್ಲಿ ಎಸ್‌ಸಿಗಳ ಉಪ-ವರ್ಗೀಕರಣವನ್ನು ಅನುಮತಿಸಲಾಗುವುದಿಲ್ಲ" ಎಂದು ಹೇಳಿದ್ದಾರೆ. ಈ ಮೂಲಕ ಒಳಮೀಸಲಾತಿಗೆ ಡಬಲ್ ಇಂಜಿನ್ ಸರ್ಕಾರ ಬದ್ಧವಾಗಿದೆ ಎಂದು ಹೇಳುತ್ತಿದ್ದ ಬಿಜೆಪಿಯ ಬೂಟಾಟಿಕೆಯನ್ನು ಇದು ಬಯಲು ಮಾಡಿದೆ ಎಂದು ಹೇಳಿದರು.

ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ನಾಯಕರು ಒಳಮೀಸಲಾತಿಗೆ ಬದ್ಧ ಎಂದು ಹೇಳಿಕೊಂಡಿದ್ದರು. ಆಗೇಕೆ ವಿಚಾರ ನ್ಯಾಯಾಲಯದ ಅಂಗಳದಲ್ಲಿದೆ ಎಂದು ಹೇಳಲಿಲ್ಲ ಎಂದು ಪ್ರಶ್ನಿಸಿದರು.

ರಾಜ್ಯಸಭೆಯಲ್ಲಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ನಾರಾಯಣಸ್ವಾಮಿ ಅವರು, ಒಳಮೀಸಲಾತಿ ವಿಚಾರವು ಸುಪ್ರಿಂ ಕೋರ್ಟ್ ನಲ್ಲಿ ಅಂಗಳದಲ್ಲಿದೆ. ಸುಪ್ರೀಂಕೋರ್ಟ್ ನ ಐವರು ನ್ಯಾಯಾಧೀಶರ ಪೀಠವು ಒಳಮೀಸಲಾತಿ ವಿಷಯವನ್ನು ಏಳು ನ್ಯಾಯಾಧೀಶರ ಪೀಠಕ್ಕೆ ವರ್ಗಾವಣೆ ಮಾಡಬೇಕೆಂದು ಮುಖ್ಯನ್ಯಾಯಮೂರ್ತಿಯನ್ನು ಕೋರಿದ್ದಾರೆಂದು ಹೇಳಿದರು.

ಆಂಧ್ರಪ್ರದೇಶದಲ್ಲಿ ಪರಿಶಿಷ್ಟ ಜಾತಿಗಳ ಉಪ-ವರ್ಗೀಕರಣದ ಸಮಸ್ಯೆಯನ್ನು ಪರಿಶೀಲಿಸಲು ರಾಷ್ಟ್ರೀಯ ಆಯೋಗವು, ಎಸ್‌ಸಿಗಳ ಉಪ-ವರ್ಗೀಕರಣ ಮತ್ತು ಡಿ-ಉಪ-ವರ್ಗೀಕರಣವನ್ನು ಒದಗಿಸಲು ಸಂವಿಧಾನದ 341ನೇ ವಿಧಿಗೆ ತಿದ್ದುಪಡಿಯನ್ನು ಶಿಫಾರಸು ಮಾಡಿದೆ.

ಎನ್‌ಸಿಎಸ್‌ಸಿಎಸ್‌ಸಿಯ ಶಿಫಾರಸುಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ತಿಳಿಸಲು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮನವಿ ಮಾಡಿಕೊಂಡಿದೆ. ಇಲ್ಲಿಯವರೆಗೆ 20 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಿಂದ ಪ್ರತಿಕ್ರಿಯೆಗಳು ಬಂದಿವೆ. ಈ ಪೈಕಿ ಏಳು ರಾಜ್ಯಗಳು ಉಪವರ್ಗೀಕರಣದ ಪರವಾಗಿವೆ, 13 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶ ಇದಕ್ಕೆ ವಿರುದ್ಧವಾಗಿದೆ ಮತ್ತು ಒಂದು ಕೇಂದ್ರಾಡಳಿತ ಪ್ರದೇಶ ಯಾವುದೇ ಪ್ರತಿಕ್ರಿಯೆಗಳನ್ನು ನೀಡಿಲ್ಲ ಎಂದು ತಿಳಿಸಿದ್ದರು.

SCROLL FOR NEXT