ರಾಜ್ಯ

ರಾಜ್ಯದಲ್ಲಿ ಮಳೆ ಹಾನಿ, ಪರಿಹಾರದ ಬಗ್ಗೆ ಸಿದ್ದು ಸರ್ಕಾರ ನಿರ್ಲಕ್ಷ್ಯ: ಬಸವರಾಜ ಬೊಮ್ಮಾಯಿ ವಾಗ್ದಾಳಿ

Nagaraja AB

ಬೆಳಗಾವಿ: ರಾಜ್ಯದಲ್ಲಿನ ಮಳೆ, ಪ್ರವಾಹ ಪರಿಸ್ಥಿತಿ ಹಾಗೂ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪರಿಸ್ಥಿತಿ ಹದಗೆಟ್ಟಿದ್ದು,  ಮಳೆಯಿಂದ ಆಗಿರುವ ಹಾನಿಯ ಬಗ್ಗೆ  ಸರಕಾರ ಗಮನಹರಿಸುತ್ತಿಲ್ಲ , ಪಕ್ಷದೊಳಗಿನ ಆಂತರಿಕ ಕಚ್ಚಾಟವನ್ನು ಬಗೆಹರಿಸಲು ಮುಖ್ಯಮಂತ್ರಿ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದು, ಸರ್ಕಾರಿ ಅಧಿಕಾರಿಗಳ ವರ್ಗಾವಣೆಯಲ್ಲಿ ವ್ಯಾಪಕ ಭ್ರಷ್ಟಾಚಾರವಾಗುತ್ತಿದ್ದು, ಸರ್ಕಾರದಲ್ಲಿರುವವರ ನಡುವೆ ಪೈಪೋಟಿ ಇದೆ ಎಂದು ಆರೋಪಿಸಿದರು. 

ಮುಖ್ಯಮಂತ್ರಿ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದು ಬಿಟ್ಟರೆ ಯಾವುದೇ ಕ್ರಮ ಕೈಗೊಂಡಿಲ್ಲ.  ಮನೆ ಹಾನಿಗೀಡಾದವರಿಗೆ ತಕ್ಷಣದ ಪರಿಹಾರ 10 ಸಾವಿರ ತಲುಪಿಲ್ಲ. ಬೆಳೆ ಹಾನಿಗೆ ಸಂಬಂಧ ಪ್ರಾಥಮಿಕ ಮೌಲ್ಯಮಾಪನವನ್ನು ಇನ್ನೂ ಮಾಡಿಲ್ಲ.  ಪ್ರಾಣಹಾನಿಯ ಬಗ್ಗೆ ಗಮನಹರಿಸಿಲ್ಲ, ಮಳೆ ಅಥವಾ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಚಿವರು  ಭೇಟಿ ನೀಡಿಲ್ಲ ಎಂದು ಅವರು ಹೇಳಿದರು.

ಬರ ಪೀಡಿತ ಪ್ರದೇಶಗಳಲ್ಲಿ ಪರ್ಯಾಯ ಬೆಳೆಗಾಗಿ ರೈತರಿಗೆ ಬೀಜ ಮತ್ತು ರಸಗೊಬ್ಬರ ನೀಡಲು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ, ಸಂಕಷ್ಟದಲ್ಲಿರುವಾಗ ಜನರನ್ನು ರಕ್ಷಿಸಲು ರಾಜ್ಯ ಸರಕಾರ ಮುಂದಾಗಿಲ್ಲ.ಹೀಗಾಗಿ, ಸಚಿವರು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ, ಸಂಕಷ್ಟದಲ್ಲಿರುವವರಿಗೆ ಪರಿಹಾರ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. 

ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಂಪೂರ್ಣ ಮನೆ ಸಂಪೂರ್ಣ ಹಾನಿಗೊಳಗಾದವರಿಗೆ 5 ಲಕ್ಷ ರೂ. ಪರಿಹಾರ ನೀಡಲಾಗುತಿತ್ತು.  ಅದನ್ನು ಮುಂದುವರಿಸಿ ತಕ್ಷಣದ ಪರಿಹಾರವಾಗಿ 10 ಸಾವಿರ ನೀಡಬೇಕು ಎಂದು ಹೇಳಿದ ಅವರು ಕೇಂದ್ರದ ಪರಿಹಾರದ ಜತೆಗೆ ಕಳೆದ ಬಾರಿ ರೈತರಿಗೆ ನೀಡಿದ್ದ ಹೆಚ್ಚುವರಿ ಪರಿಹಾರವನ್ನು ಈ ಬಾರಿಯೂ ಮುಂದುವರಿಸಬೇಕು ಎಂದು ಅವರು ಆಗ್ರಹಿಸಿದರು. 

SCROLL FOR NEXT