ರಾಜ್ಯ

ಮಂಗಳೂರು: ಸೋಮೇಶ್ವರ ಬೀಚ್ ನಲ್ಲಿ ನೈತಿಕ ಪೊಲೀಸ್ ಗಿರಿ; ಅಪ್ರಾಪ್ತ ಸೇರಿದಂತೆ ಐದು ಮಂದಿ ಬಂಧನ

Ramyashree GN

ಮಂಗಳೂರು: ನಗರದ ಹೊರವಲಯದ ಸೋಮೇಶ್ವರ ಬೀಚ್‌ನಲ್ಲಿ ನಡೆದ 'ನೈತಿಕ ಪೊಲೀಸ್‌ಗಿರಿ'ಗೆ ಸಂಬಂಧಿಸಿದಂತೆ ಅಪ್ರಾಪ್ತ ವಯಸ್ಕ ಸೇರಿದಂತೆ ಐವರು ಹಿಂದುತ್ವವಾದಿಗಳನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.

ಬಸ್ತಿಪಡ್ಪುವಿನ ಯತೀಶ್, ತಲಪಾಡಿಯ ಸಚಿನ್, ಸುಹಾನ್ ಮತ್ತು ಅಖಿಲ್ ಬಂಧಿತರು. ಇತರ ಶಂಕಿತರನ್ನು ಬಂಧಿಸಲು ಮೂರು ತಂಡಗಳನ್ನು ರಚಿಸಲಾಗಿದೆ ಮತ್ತು ಬಂಧಿತ ವ್ಯಕ್ತಿಗಳ ವಿರುದ್ಧ ಗಲಭೆ ಮತ್ತು ಕೊಲೆ ಯತ್ನದ ಪ್ರಕರಣಗಳನ್ನು ದಾಖಲಿಸಲಾಗಿದೆ.

ಶುಕ್ರವಾರ ಬೆಳಗ್ಗೆ ಉಳ್ಳಾಲ ಠಾಣೆಗೆ ಭೇಟಿ ನೀಡಿದ್ದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್ ಜೈನ್ , ಇನ್ನೂ ಕೆಲವು ಶಂಕಿತರನ್ನು ಬಂಧಿಸಬೇಕಿದ್ದು, ಮೂರು ತಂಡಗಳು ಕಾರ್ಯನಿರ್ವಹಿಸುತ್ತಿವೆ.

ಇಂತಹ ಪ್ರಕರಣಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುತ್ತೇವೆ. ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗುವುದು. ಪರಿಣಾಮಕಾರಿ ಪೊಲೀಸ್ ಗಸ್ತು ವಿಗೆ ಕ್ರಮ ವಹಿಸಲಾಗುವುದು, ಬೀಚ್‌ಗಳಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗುವುದು, ಬೀಚ್ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸರು ರೌಂಡ್ಸ್ ಗೆ ತೆರಳಲಿದ್ದಾರೆ ಎಂದು ತಿಳಿಸಿದರು. 

ಮಂಗಳೂರಿನ ಖಾಸಗಿ ಕಾಲೇಜೊಂದರ  ಮೂವರು ಮುಸ್ಲಿಂ ಯುವಕರಾದ ಆಶಿಕ್, ಮುಜೀಬ್ ಮತ್ತು ಜಾಫರ್ ಷರೀಫ್ ಗುರುವಾರ ವಿವಿಧ ಧರ್ಮಗಳಿಗೆ ಸೇರಿದ ಮೂವರು ಮಹಿಳಾ ಸ್ನೇಹಿತರ ಜೊತೆ ಗುರುವಾರ ಸೋಮೇಶ್ವರ ಬೀಚ್ ನಲ್ಲಿ ಸುತ್ತಾಡುತ್ತಿದ್ದರು. ರಾತ್ರಿ 7.20 ರ ಸುಮಾರಿಗೆ ಅಲ್ಲಿಗೆ ಬಂದ 10 ರಿಂದ 15 ಜನರ ಗುಂಪು ಅವರ ಹೆಸರು ಮತ್ತು ಗುರುತಿನ ಚೀಟಿ ಕೇಳಿದ್ದಾರೆ.

ನಂತರ ಆರೋಪಿಗಳು ವಿವಿಧ ಧರ್ಮದ ಮಹಿಳೆಯರೊಂದಿಗೆ ಒಡನಾಟ ಹೊಂದಿದ್ದಕ್ಕಾಗಿ ಮೂವರು ಯುವಕರನ್ನು ನಿಂದಿಸಿ ದೊಣ್ಣೆ, ಬೆಲ್ಟ್, ಕಲ್ಲುಗಳಿಂದ  ಥಳಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ ಗಸ್ತು ತಂಡವು ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದೆ. ಎಲ್ಲಾ 6 ಮಂದಿ ಕೇರಳದವರು ಎನ್ನಲಾಗಿದೆ. 

SCROLL FOR NEXT