ರಾಜ್ಯ

ಪ್ರತಿಯೊಬ್ಬ ಕನ್ನಡಿಗನನ್ನು ಸುರಕ್ಷಿತವಾಗಿ ನಾಡಿಗೆ ಕರೆತರಲು ಸರ್ಕಾರ ಬದ್ಧವಿದೆ: ಸಿಎಂ ಸಿದ್ದರಾಮಯ್ಯ

Manjula VN

ಬೆಂಗಳೂರು: ಪ್ರತಿಯೊಬ್ಬ ಕನ್ನಡಿಗನನ್ನು ಸುರಕ್ಷಿತವಾಗಿ ನಾಡಿಗೆ ಕರೆತರಲು ಸರ್ಕಾರ ಬದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಹೇಳಿದ್ದಾರೆ.

ಒಡಿಶಾ ರೈಲು ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಒಡಿಶಾದ ಬಾಲಸೋರ್ ನಲ್ಲಿ ಸಂಭವಿಸಿದ ರೈಲು ದುರಂತದ ಹಿನ್ನೆಲೆಯಲ್ಲಿ ತಕ್ಷಣ ಘಟನಾ ಸ್ಥಳಕ್ಕೆ ತೆರಳಿ ಕನ್ನಡಿಗರ ಸುರಕ್ಷತೆ ಬಗ್ಗೆ ಗಮನ ಹರಿಸುವಂತೆ ಹಾಗೂ ಅವರಿಗೆ ಅಗತ್ಯ ನೆರವನ್ನು ನೀಡುವಂತೆ ಸಚಿವ ಸಂತೋಷ್ ಲಾಡ್ ಅವರಿಗೆ ಸೂಚಿಸಿದ್ದೇನೆ. ಘಟನೆಯಲ್ಲಿ ಗಾಯಗೊಂಡ ಅಥವಾ ಇತರೆ ಯಾವುದೇ ಸಮಸ್ಯೆ ಎದುರಿಸುತ್ತಿರುವ ಕನ್ನಡಿಗರ ರಕ್ಷಣೆಗೆ ನಾವು ಬದ್ಧರಿದ್ದೇವೆ. ಪ್ರತಿಯೊಬ್ಬ ಕನ್ನಡಿಗನನ್ನು ನಾವು ಸುರಕ್ಷಿತವಾಗಿ ನಾಡಿಗೆ ಕರೆ ತರುತ್ತೇವೆಂದು ಹೇಳಿದ್ದಾರೆ.

ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಸಚಿವ ಸಂತೋಷ್ ಲಾಡ್ ಅವರು, ಮೇರೆಗೆ ಒಡಿಶಾ ರಾಜ್ಯಕ್ಕೆ ತೆರಳುತ್ತಿದ್ದು, ಮಧ್ಯಾಹ್ನ 2.30ಕ್ಕೆ ಸಚಿವರು ಭುವನೇಶ್ವರಕ್ಕೆ ತೆರಳುತ್ತಿದ್ದಾರೆಂದು ತಿಳಿದುಬಂದಿದೆ.

ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ತಂಡದ ಜೊತೆ ಸಂತೋಶ್ ಅವರು ಚಾರ್ಟರ್ಡ್ ಫ್ಲೈಟ್​​ನಲ್ಲಿ ಒಡಿಶಾಗೆ ತೆರಳುತ್ತಿದ್ದಾರೆಂದು ವರದಿಗಳು ತಿಳಿಸಿವೆ.

ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿರುವ ಸಂತೋಷ್ ಲಾಡ್ ಅವರು, ಕನ್ನಡಿಗರನ್ನ ಸುರಕ್ಷಿತವಾಗಿ ಕರೆತರುವುದು ನಮ್ಮ ಜವಾಬ್ದಾರಿ. ವಿಶೇಷ ಏರ್ ಕ್ರಾಫ್ಟ್ ಮೂಲಕ ಮಧ್ಯಾಹ್ನ 2.30 ಕ್ಕೆ ವಿಪತ್ತು ನಿರ್ವಹಣಾ ಇಲಾಖೆ ಅಧಿಕಾರಿಗಳ ಜೊತೆ ಭುವನೇಶ್ವರಕ್ಕೆ ಹೋಗುತ್ತಿದ್ದೇನೆ. ಅಲ್ಲಿಂದ ರಸ್ತೆ ಮಾರ್ಗವಾಗಿ ಸ್ಥಳಕ್ಕೆ ತೆರಳಬೇಕಾಗಿದೆ. ಸಂಜೆ 6-7 ಗಂಟೆಗೆ ನಾನು ದುರಂತ ಸ್ಥಳಕ್ಕೆ ತಲುಪಬಹುದು. ಅಲ್ಲಿ ಹೋದ ಮೇಲೆ ವ್ಯವಸ್ಥೆಗೆ ಏನು ಲಭ್ಯ ಇದೆ ಎಂಬುದನ್ನು ನೋಡಬೇಕಾಗುತ್ತದೆ. ಕನ್ನಡಿಗರಿಗೆ ಯಾವುದೇ ತೊಂದರೆ ಇದ್ದರೆ ಚಿಕಿತ್ಸೆ, ಸುರಕ್ಷಿತವಾಗಿ ಕರೆತರುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.

ಪ್ರಾಥಮಿಕ ಮಾಹಿತಿ ಪ್ರಕಾರ ಕನ್ನಡಿಗರಿಗೆ ಈಗ ಯಾರಿಗೂ ಯಾವುದೇ ಸಮಸ್ಯೆ ಆಗಿಲ್ಲ. ಯಾವ ರೀತಿ ಕರೆತರುವುದು ಎಂಬ ಬಗ್ಗೆ ಅಲ್ಲಿನ ಪರಿಸ್ಥಿತಿ ನೋಡಿ ನಿರ್ಧಾರ ಮಾಡುತ್ತೇನೆ. ದುರಂತ ಸ್ಥಳದಲ್ಲಿರುವ ಕನ್ನಡಿಗರು ನನ್ನ ಮೊಬೈಲ್ ಸಂಖ್ಯೆಗೆ 9845739999 ಸಂಪರ್ಕಿಸಬಹುದು. ನಾನು ವೈಯಕ್ತಿಕವಾಗಿ ಅಲ್ಲಿ ಅವರನ್ನು ಅಟೆಂಡ್ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

SCROLL FOR NEXT