ರಾಜ್ಯ

ನೈತಿಕ ಪೊಲೀಸ್‌ಗಿರಿ ತಡೆಗಟ್ಟಲು ಕ್ರಮ: ನಿಗದಿತ ಸಮಯದವರೆಗೆ ಶಾಂತಿ ಕಾಪಾಡಿಕೊಳ್ಳಲು ಬಾಂಡ್ ಕಡ್ಡಾಯ

Ramyashree GN

ಮಂಗಳೂರು: ನೈತಿಕ ಪೊಲೀಸ್‌ಗಿರಿಯನ್ನು ಕಡಿಮೆ ಮಾಡುವ ಸಲುವಾಗಿ, ನಗರದ ಪೊಲೀಸರು ಕಳೆದ ಐದು ವರ್ಷಗಳಲ್ಲಿ ಅಂತಹ ಪ್ರಕರಣಗಳಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧವೂ ಸೆಕ್ಷನ್ 107 ಮತ್ತು 110 ರ ಅಡಿಯಲ್ಲಿ ಪ್ರಕರಣ ದಾಖಲಿಸಲು ಪ್ರಾರಂಭಿಸಲಿದ್ದಾರೆ.

ಸೆಕ್ಷನ್ 107 ಮ್ಯಾಜಿಸ್ಟ್ರೇಟ್‌ಗೆ ಅಧಿಕಾರ ನೀಡುವುದರೊಂದಿಗೆ, ತುರ್ತು ಸಂದರ್ಭದಲ್ಲಿ ಶಾಂತಿಗೆ ಭಂಗ ಉಂಟಾದರೆ, ಆರೋಪಿಯು ನಿಗದಿತ ಸಮಯದವರೆಗೆ ಶಾಂತಿಯನ್ನು ಕಾಪಾಡಿಕೊಳ್ಳಲು ಕೇಳುವ ಬಾಂಡ್‌ಗೆ ಒಪ್ಪಿಕೊಳ್ಳುವಂತೆ ಆದೇಶಿಸುತ್ತದೆ. ಸೆಕ್ಷನ್ 110 ನಿಯಮಿತ ಅಪರಾಧಿಗಳ ಉತ್ತಮ ನಡವಳಿಕೆಗಾಗಿ ಭದ್ರತೆಯನ್ನು ಕಡ್ಡಾಯಗೊಳಿಸುತ್ತದೆ.

ಇಲ್ಲಿಯವರೆಗೆ, ನೈತಿಕ ಪೊಲೀಸ್‌ಗಿರಿ ಆರೋಪ ಹೊತ್ತವರ ಮೇಲೆ ಕೇವಲ ಗಲಭೆ ಮತ್ತು ಗಾಯದ ಪ್ರಕರಣವನ್ನು ದಾಖಲಿಸಲಾಗುತ್ತಿತ್ತು, ಅದು ಅವರಿಗೆ ಸುಲಭವಾಗಿ ತಪ್ಪಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿತ್ತು. ಇದೀಗ, ಹತ್ತಾರು ಸಾವಿರ ರೂಪಾಯಿ ಮೌಲ್ಯದ ಬಾಂಡ್‌ಗಳನ್ನು ಕಡ್ಡಾಯಗೊಳಿಸುವುದು ನೈತಿಕ ಪೊಲೀಸ್‌ಗಿರಿ ವಿರುದ್ಧ ಪರಿಣಾಮಕಾರಿ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ.

ಕೆಲವು ದಿನಗಳ ಹಿಂದೆ ಮಂಗಳೂರು ಸಮೀಪದ ಸೋಮೇಶ್ವರ ಬೀಚ್‌ನಲ್ಲಿ ಏಳು ಬಲಪಂಥೀಯ ಕಾರ್ಯಕರ್ತರು ಮೂವರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ಕಾನೂನನ್ನು ಕೈಗೆತ್ತಿಕೊಳ್ಳುವ ಬಲಪಂಥೀಯ ಕಾರ್ಯಕರ್ತರ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳುವುದಾಗಿ ಆಡಳಿತಾರೂಢ ಕಾಂಗ್ರೆಸ್ ಭರವಸೆ ನೀಡಿದೆ.

ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಮಾತನಾಡಿ, ಈ ಹಿಂದೆ ನೈತಿಕ ಪೊಲೀಸ್ ಗಿರಿ ಆರೋಪದ ಮೇಲೆ ಹಲವು ಜನರ ವಿರುದ್ಧ ಕೇವಲ ತಡೆಗಟ್ಟುವ ಸಲುವಾಗಿ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಇದೀಗ ಕಳೆದ ಐದು ವರ್ಷಗಳಲ್ಲಿ ನೈತಿಕ ಪೊಲೀಸ್‌ಗಿರಿಯಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧವೂ ಪೊಲೀಸರು ಇಂತಹ ಪ್ರಕರಣಗಳನ್ನು ದಾಖಲಿಸಲು ಪ್ರಾರಂಭಿಸಲಿದ್ದಾರೆ ಎಂದರು.

ಈ ಕ್ರಮವು ಭವಿಷ್ಯದಲ್ಲಿ ಜನರು ನೈತಿಕ ಪೊಲೀಸ್‌ಗಿರಿಯಲ್ಲಿ ತೊಡಗುವುದನ್ನು ತಡೆಯುತ್ತದೆ. ಆರೋಪಿಯು ಒಂದು ವರ್ಷದ ಬಾಂಡ್ ಅವಧಿಯಲ್ಲಿ ಮತ್ತೆ ಉಲ್ಲಂಘನೆ ಮಾಡಿದರೆ, ನಂತರ ಬಾಂಡ್ ಅನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಅವರು ಹೇಳಿದರು.

ನೈತಿಕ ಪೊಲೀಸ್‌ಗಿರಿಯನ್ನು ತಡೆಯಲು ಮಾಲ್‌ಗಳು, ಬೀಚ್‌ಗಳು ಮತ್ತು ಇತರ ಸ್ಥಳಗಳಲ್ಲಿ ಸಂಜೆ 5 ರಿಂದ ರಾತ್ರಿ 10ರವರೆಗೆ ಗಸ್ತು ತೀವ್ರಗೊಳಿಸಲಾಗುವುದು ಅಥವಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಆಯುಕ್ತರು ಹೇಳಿದರು.

ಈಮಧ್ಯೆ, ಸೋಮೇಶ್ವರ ಬೀಚ್‌ನಲ್ಲಿ ನೈತಿಕ ಪೊಲೀಸ್‌ಗಿರಿ ಆರೋಪದಲ್ಲಿ ಬಂಧಿತರಾಗಿರುವ ಏಳು ಮಂದಿಯನ್ನು ಜೂನ್ 14ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

SCROLL FOR NEXT