ರಾಜ್ಯ

ಚುನಾವಣೆಗಳಲ್ಲಿ ಹಣದ ಪ್ರಭಾವ ಹೆಚ್ಚಳ ಕುರಿತು ಮಾಜಿ ಸಿಎಂ ಎಸ್ ಎಂ ಕೃಷ್ಣ ಕಳವಳ

Sumana Upadhyaya

ಬೆಂಗಳೂರು: ಚುನಾವಣೆಗಳಲ್ಲಿ ಹೆಚ್ಚುತ್ತಿರುವ ಹಣದ ಪ್ರಭಾವದ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಈ ಪರಿಸ್ಥಿತಿ ಪ್ರಜಾಪ್ರಭುತ್ವವನ್ನು ಹಳಿತಪ್ಪಿಸುವ ಸಾಧ್ಯತೆಯಿರುವುದರಿಂದ ಜನರು ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು ಎಂದು ಕರೆ ನೀಡಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಪತ್ರಿಕಾ ಸಂಸ್ಥೆ ಪ್ರಕಟಿಸಿರುವ ಮಾಜಿ ಸಿಎಂ ಎಸ್‌ಆರ್‌ ಬೊಮ್ಮಾಯಿ ಅವರ ಜೀವನ ಕುರಿತಾದ ‘ದಿ ರಾಡಿಕಲ್‌ ಹ್ಯೂಮನಿಸ್ಟ್‌’ ಪುಸ್ತಕವನ್ನು ನಿನ್ನೆ ಮಂಗಳವಾರ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು. 

ಪ್ರಜಾಪ್ರಭುತ್ವದಲ್ಲಿ ಹಣವು ಹೇಗೆ ಅಪಾಯಕಾರಿ ಪಾತ್ರವನ್ನು ವಹಿಸುತ್ತಿದೆ ಎಂಬುದಕ್ಕೆ ಇತ್ತೀಚಿನ ಚುನಾವಣೆ ಉದಾಹರಣೆಯಾಗಿದೆ. ಪ್ರಜಾಪ್ರಭುತ್ವ ಎಲ್ಲಿಗೆ ಹೋಗುತ್ತಿದೆ ಎಂಬುದರ ಬಗ್ಗೆ ಗಂಭೀರ ಆತ್ಮಾವಲೋಕನ ಮಾಡಿಕೊಳ್ಳಬೇಕು. ಅದನ್ನು ತಡೆಯಲು ಹೋರಾಟ ನಡೆಸಬೇಕು ಎಂದು ಒತ್ತಾಯಿಸಿದ ಅವರು ಚುನಾವಣಾ ಆಯೋಗದ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಎಸ್‌ಆರ್ ಬೊಮ್ಮಾಯಿ ಅವರ ನಿರ್ಣಯವು ರಾಜ್ಯಪಾಲರ ಅಸಾಂವಿಧಾನಿಕ ಕ್ರಮವನ್ನು ಹೇಗೆ ಕೊನೆಗೊಳಿಸಿತು ಎಂಬುದನ್ನು ನೆನಪಿಸಿಕೊಂಡರು. ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಬೊಮ್ಮಾಯಿ ಅವರು ಅಲ್ಪಾವಧಿ ಸಿಎಂ ಆಗಿ ಅಧಿಕಾರದಲ್ಲಿದ್ದರೂ ಅವರು ನೀಡಿದ ಆಡಳಿತ ಇಂದಿಗೂ ಉದಾಹರಣೆಯಾಗಿದೆ ಎಂದರು. 

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು, ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ, ಪಿ.ಜಿ.ಆರ್.ಸಿಂಧ್ಯಾ, ಬಿ.ಎಲ್.ಶಂಕರ್, ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಂಪಾದಕಿ ಸಾಂತ್ವನಾ ಭಟ್ಟಾಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

SCROLL FOR NEXT