ರಾಜ್ಯ

ಕಾಂಗ್ರೆಸ್ ಮೀಸಲಾತಿ ಬದಲಾಯಿಸಿದರೆ ಸುಮ್ಮನೆ ಕೂರುವುದಿಲ್ಲ: ಬಿಜೆಪಿ ನಾಯಕ ಆರ್ ಅಶೋಕ

Ramyashree GN

ಬೆಂಗಳೂರು: ಸಾಮಾಜಿಕ-ಆರ್ಥಿಕ ಜಾತಿ ಸಮೀಕ್ಷೆಯನ್ನು ಅಂಗೀಕರಿಸುವುದಾಗಿ ಮತ್ತು ವರದಿಯ ಆಧಾರದ ಮೇಲೆ ವಿವಿಧ ಸಮುದಾಯಗಳಿಗೆ ಸೌಲಭ್ಯಗಳನ್ನು ಒದಗಿಸುವುದಾಗಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಮುಖ್ಯಮಂತ್ರಿಗಳು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳನ್ನು ಬದಿಗೊತ್ತಲು ಪ್ರಯತ್ನಿಸುತ್ತಿದ್ದಾರೆ ಮತ್ತು ಜಾತಿ ಅಂಕಿ-ಅಂಶಗಳನ್ನು ಬಿಡುಗಡೆ ಮಾಡುವ ಮೂಲಕ ಕೇವಲ ಒಂದು ಸಮುದಾಯವನ್ನು ಮೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ಮತ್ತು ಮಾಜಿ ಸಚಿವ ಆರ್. ಅಶೋಕ ಗುರುವಾರ ವಾಗ್ದಾಳಿ ನಡೆಸಿದ್ದಾರೆ.

'ಜಾತಿ ಗಣತಿ ಬಿಡುಗಡೆ ಮಾಡಲಿ, ಜನರೇ ತಕ್ಕ ಪಾಠ ಕಲಿಸುತ್ತಾರೆ. ಹಿಂದಿನ ಬಿಜೆಪಿ ಸರ್ಕಾರ ಘೋಷಿಸಿದ್ದ ಮೀಸಲಾತಿ ಕೋಟಾ ಬದಲಿಸಿದರೆ, ಸುಮ್ಮನಿರುವುದಿಲ್ಲ. ಬಿಜೆಪಿ ಪಕ್ಷ ಮಾತ್ರವಲ್ಲ, ಅವರ ವಿರುದ್ಧ ರಾಜ್ಯದ ಜನತೆ ಪ್ರತಿಭಟಿಸಲಿದ್ದಾರೆ' ಎಂದರು.
ಗ್ಯಾರಂಟಿ ಯೋಜನೆಗಳ ಬಗ್ಗೆ ಗೊಂದಲವಿದೆ ಎಂದು ಅಶೋಕ ಹೇಳಿದರು.

‘ಪ್ರತಿಯೊಬ್ಬ ಸಚಿವರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ತನಗೆ ಹಾಗೂ ಎಲ್ಲಾ ಜನರಿಗೆ ಉಚಿತ ಎಂದು ಈ ಹಿಂದೆ ಹೇಳಿಕೊಂಡಿದ್ದರು. ಆದರೆ, ಈಗ ಆದಾಯ ತೆರಿಗೆ ಪಾವತಿಸುವವರಿಗೆ ಗ್ಯಾರಂಟಿ ಯೋಜನೆಗಳು ಅನ್ವಯವಾಗುವುದಿಲ್ಲ ಎನ್ನುತ್ತಿದ್ದಾರೆ' ಎಂದು ದೂರಿದರು.

'ಈ ಹಿಂದೆ ಕಾಂಗ್ರೆಸ್ ಯಾವುದೇ ಷರತ್ತುಗಳಿಲ್ಲ ಎಂದು ಹೇಳಿಕೊಂಡಿತ್ತು.  ಆದರೆ ಈಗ ಫಲಾನುಭವಿಗಳಿಗೆ ಹೊಸ ನಿಯಮಾವಳಿಗಳನ್ನು ಬಿಡುಗಡೆ ಮಾಡಲಾಗಿದೆ. ಇದು ಜನರ ಹಣವನ್ನು ಕಿತ್ತುಕೊಂಡು ಅವರಿಗೆ ನೀಡುವಂತಿದೆ, ಕಾಂಗ್ರೆಸ್ ತಂತ್ರವನ್ನು ಮೆಚ್ಚಬೇಕು' ಎಂದಿದ್ದಾರೆ.

'ಅವರ ವಿರುದ್ಧ ಬಿಜೆಪಿ ಪ್ರತಿಭಟನೆಯನ್ನು ನಡೆಸುತ್ತದೆ. ಕಾಂಗ್ರೆಸ್ ನಾಯಕರು ಇಲ್ಲಿಲ್ಲ. ಅವರು ಜನರನ್ನು ಬಂಧಿಸುತ್ತೇವೆ ಎಂದು ಹಾರಾಡುತ್ತಿದ್ದಾರೆ ಮತ್ತು ಘೋಷಣೆ ಮಾಡುತ್ತಿದ್ದಾರೆ' ಎಂದು ಬಿಜೆಪಿ ನಾಯಕ ಹೇಳಿದರು.

SCROLL FOR NEXT