ರಾಜ್ಯ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಗೃಹಲಕ್ಷ್ಮಿ ಯೋಜನೆಯ ಅರ್ಜಿ ನಮೂನೆ ಅಂತಿಮವಲ್ಲ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

Nagaraja AB

ಬೆಂಗಳೂರು: ರಾಜ್ಯ ಸರ್ಕಾರ ಘೋಷಿಸಿರುವ ಗೃಹಲಕ್ಷ್ಮಿ ಯೋಜನೆಯ ಅರ್ಜಿಯ ಕರಡು ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆ ಅರ್ಜಿ ಇನ್ನೂ ಅಂತಿಮವಾಗಿಲ್ಲ, ಅದರಲ್ಲಿ ಸಾಕಷ್ಟು ಬದಲಾವಣೆಗಳು ಆಗಲಿದ್ದು, ಅಂತಿಮ ಅರ್ಜಿಯನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್  ತಿಳಿಸಿದ್ದಾರೆ.

ವಿಧಾನಸೌಧದ ತಮ್ಮ ಕಚೇರಿಯಲ್ಲಿಂದು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳು ಸೇರಿದಂತೆ ವಾಟ್ಸಾಪ್ ನಲ್ಲಿ ಫಾರ್ಮ್ ಓಡಾಡ್ತಿರೋದು ಅಸಲಿಯಾಗಿದ್ದು ಅಂತಿಮವಾಗಿಲ್ಲ, ಕೆಲವೊಂದು ಬದಲಾವಣೆ ಮಾಡಲಿದ್ದೇವೆ ಎಂದು ಹೇಳಿದರು.

ಈಗಾಗಲೇ ಅರ್ಜಿಯಲ್ಲಿ ಕೆಲವೊಂದು ಬದಲಾವಣೆಗೆ ಸಲಹೆ-ಸೂಚನೆಗಳು ಬಂದಿದ್ದು, ಉತ್ತಮ ಸಲಹೆಗಳನ್ನು ಮುಕ್ತವಾಗಿ ಅಳವಡಿಸಿಕೊಳ್ಳಲಾಗುವುದು. ಮುಖ್ಯವಾಗಿ ಫಲಾನುಭವಿಗಳ ಬ್ಯಾಂಕ್ ಪಾಸ್ ಬುಕ್ ಮಾಹಿತಿ ಸೇರಿಸಲಾಗುವುದು, ಜಾತಿ ಬದಲು ವರ್ಗ ಅಂತ ಹಾಕುತ್ತೇವೆ, ಸಂದೇಶ ತಪ್ಪಾಗಿ ಹೋಗಬಾರದು ಎಂದರು.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಅರ್ಜಿ ನಮೂನೆ 

ಗಂಡ ತೆರಿಗೆ ಕಟ್ಟೋದು ಮಾತ್ರ ಒಳಪಡುತ್ತೆ, ಮಗ ತೆರಿಗೆ ಕಟ್ಟೋದು ಅನ್ವಯ ಆಗಲ್ಲ, ಯೋಜನೆಯ ಫಲಾನುಭವಿಗಳು ಬಹುತೇಕ 90% ಬಿಪಿಎಲ್ ಕಾರ್ಡ್ ನಲ್ಲಿಮಹಿಳೆಯರೇ ಪ್ರಮುಖ ಆಗಲಿದ್ದಾರೆ. ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭ ಸಿಗಬೇಕು ಮತ್ತು ಅವರನ್ನು ತಪ್ಪದೇ ಸೇರಿಸಲಾಗುತ್ತದೆ ಎಂದು ಹೇಳಿದರು.

ಈ ಮಧ್ಯೆ ಗೃಹಲಕ್ಷ್ಮಿ ಯೋಜನೆ ಅತ್ಯಂತ ದೊಡ್ಡ ಪಿಂಚಣಿ ಯೋಜನೆಯಾಗಿದ್ದು, ಮಹಿಳಾ ಮತ್ತು ಮಕ್ಕಳ ಇಲಾಖೆ ಅಷ್ಟೊಂದು ಅಧಿಕಾರಿ, ಸಿಬ್ಬಂದಿ ಹೊಂದಿರದ ಕಾರಣಕ್ಕೆ ಕಂದಾಯ ಇಲಾಖೆ ವತಿಯಿಂದ ಸಹಕಾರ ನೀಡಲು ನಿರ್ಧರಿಸಲಾಗಿದೆ ಎಂದ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. 

ರಾಜ್ಯದಲ್ಲಿ ಈಗಾಗಲೇ ಸುಮಾರು 78 ಲಕ್ಷ ಜನ ವಿವಿಧ ರೀತಿಯ ಪಿಂಚಣಿ ಫಲಾನುಭವಿಗಳಿದ್ದಾರೆ. ವಿಧವೆಯರು, ಅಂಗವಿಕಲರು, ತೃತಿಯ ಲಿಂಗಿಗಳು ಸೇರಿದಂತೆ ಸುಮಾರು 78 ಲಕ್ಷ ಜನರಿಗೆ ಪ್ರತಿವರ್ಷ ಪಿಂಚಣಿ ಲಭಿಸುತ್ತಿದೆ ಮತ್ತು 10,411 ಕೋಟಿ ರೂ. ಹಣ ಇಂತಹ ವಿವಿಧ ಪಿಂಚಣಿಗಳಿಗೆ ವೆಚ್ಚವಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಡಿ ಸುಮಾರು 1.3 ಕೋಟಿಗೂ ಹೆಚ್ಚು ಅರ್ಜಿಗಳು ಬರುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದು ಅವರು ಮಾಹಿತಿ ನೀಡಿದರು. 

SCROLL FOR NEXT