ರಾಜ್ಯ

ಬೆಂಗಳೂರು: ದುಡ್ಡು ಪಡೆದು ತರಗತಿ ನಡೆಸದ ಕೈಬರಹ ಸಂಸ್ಥೆ, ದೂರು ದಾಖಲಿಸಿದ ಮಹಿಳೆ

Manjula VN

ಬೆಂಗಳೂರು: ದುಡ್ಡು ಪಡೆದುಕೊಂಡು ತರಗತಿ ನಡೆಸದೆ, ಕೈಗೂ ಸಿಗದ ಬಸವನಗುಡಿ ಚರ್ಚ್ ರಸ್ತೆಯಲ್ಲಿರುವ ಕೈಬರಹ ಸಂಸ್ಥೆ ವಿರುದ್ಧ ನಗರದ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ.

ಬನಶಂಕರಿ 3ನೇ ಹಂತದ ನಿವಾಸಿ ಕಾವ್ಯಾ (ಹೆಸರು ಬದಲಿಸಲಾಗಿದೆ) ದೂರು ದಾಖಲಿಸಿದ ಮಹಿಳೆಯಾಗಿದ್ದಾರೆ. 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದ ಮಗಳನ್ನು ಬಸವನಗುಡಿಯ ಚರ್ಚೆ ರಸ್ತೆಯಲ್ಲಿರುವ ಕೈಬರಹ ಸಂಸ್ಥೆಗೆ 2020ರಲ್ಲಿ ಸೇರ್ಪಡೆಗೊಳಿಸಲಾಗಿತ್ತು. 2 ಕಂತಿನ ಮೂಲಕ ರೂ.25,000 ಹಣವನ್ನು ಪಾವತಿಸಲಾಗಿತ್ತು. ಈ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗ ಇದ್ದ ಹಿನ್ನೆಲೆಯಲ್ಲಿ ಸಂಸ್ಥೆ ತರಗತಿಗಳನ್ನು ನಡೆಸಿರಲಿಲ್ಲ. ಸಂಸ್ಥೆಯ ನಿರ್ದೇಶಕರು ಹಣವನ್ನು ವಾಪಸ್ ಮಾಡದೆ, ತರಗತಿಗಳನ್ನು ನಡೆಸಿರಲಿಲ್ಲ. ನಂತರ ಆನ್ ಲೈನ್ ತರಗತಿ ನಡೆಸುವುದಾಗಿ ತಿಳಿಸಿದ್ದರು. ಆದರೆ, ಅದನ್ನೂ ಮಾಡಲಿಲ್ಲ.

ರಫೀವುಲ್ಲಾ ಬೇಗ್ ಹಾಗೂ ಇಮ್ರಾನ್ ಬೇಗ್ ಸಹೋದರರಾಗಿದ್ದು, ಇಬ್ಬರೂ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಸಂಬಂಧಿಕರೊಬ್ಬರು ನಿರ್ದೇಶಕರನ್ನು ಸಂಪರ್ಕಿಸಿದ್ದರು. ಈ ವೇಳೆ ಹಣವನ್ನು ಮರಳಿಸುತ್ತೇವೆ. ಆದರೆ, ವೈಯಕ್ತಿಕ ಕಾರಣಗಳಿಂದಾಗಿ ತರಗತಿಗೆ ಬರಲು ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿನಿ ಪತ್ರ ಬರೆದು ನೀಡಬೇಕೆಂದು ಷರತ್ತು ಹಾಕಿದ್ದರು. ನನ್ನ ಮಗಳು ಈ ವರ್ಷ 10 ತರಗತಿಯಾಗಿದ್ದು, ಆಕೆಗೆ ತರಗತಿಗಳು ಅತ್ಯಗತ್ಯವಾಗಿದೆ. ಹೀಗಾಗಿ ಪತ್ರ ನೀಡಲು ನಿರಾಕರಿಸಿದ್ದೆವು. ನಂತರ ಸಂಸ್ಥೆಯ ನಿರ್ದೇಶಕರು ಪ್ರತಿಕ್ರಿಯೆ ನೀಡುವುದನ್ನೇ ನಿಲ್ಲಿಸಿದ್ದರು ಎಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ.

ಈ ನಡುವೆ ಸಂಸ್ಥೆ ವೆಬ್ ಸೈಟ್ ನಲ್ಲಿ ನೀಡಲಾಗಿರುವ ಫೋನ್ ನಂಬರ್ ಸಂಪರ್ಕಿಸಲು ಯತ್ನ ನಡೆಸಲಾಯಿತು. ಆದರೆ, ಫೋನ್ ಗಳು ಸ್ವಿಚ್ ಆಫ್ ಆಗಿರುವುದು ಕಂಡು ಬಂದಿದೆ.

ಪೊಲೀಸ್ ಅಧಿಕಾರಿಗಳು ಪ್ರತಿಕ್ರಿಯೆ ನೀಡಿ, ಸಂಸ್ಥೆಯ ನಿರ್ದೇಶಕರಿಗೆ ಶೀಘ್ರದಲ್ಲೇ ನೋಟಿಸ್ ಜಾರಿ ಮಾಡಲಿದ್ದು, ವಿಚಾರಣೆ ನಡೆಸುತ್ತೇವೆಂದು ಹೇಳಿದ್ದಾರೆ.

SCROLL FOR NEXT