ರಾಜ್ಯ

ಬಜರಂಗ ದಳದ ಕಾರ್ಯಕರ್ತರನ್ನು ಥಳಿಸಲು, ದ್ರಾವಿಡ ಸೇನೆ ಆರಂಭಿಸಲು ಅಗ್ನಿ ಶ್ರೀಧರ್ ಕರೆ; ನಟ ಚೇತನ್ ತಿರುಗೇಟು!

Ramyashree GN

ಬೆಂಗಳೂರು: ಲೇಖಕ ಅಗ್ನಿ ಶ್ರೀಧರ್ ಅವರು ಇತ್ತೀಚಿನ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿ ಹಳ್ಳಿ ಮತ್ತು ಪಟ್ಟಣದಲ್ಲಿ ದ್ರಾವಿಡ ಸೈನ್ಯವನ್ನು ಪ್ರಾರಂಭಿಸಿ ಮತ್ತು ಬಜರಂಗದಳದ ಕಾರ್ಯಕರ್ತರನ್ನು ಬದಲಾಯಿಸಿ ಅಥವಾ ಥಳಿಸಿ ಎಂದು ಹೇಳಿಕೆ ನೀಡಿರುವುದು ಇದೀಗ ವಿವಾದವನ್ನು ಹುಟ್ಟುಹಾಕಿದೆ.

ನಟ ಚೇತನ್ ಕುಮಾರ್ ಭಾನುವಾರ ಅಗ್ನಿ ಶ್ರೀಧರ್ ಹೇಳಿಕೆಯನ್ನು ಖಂಡಿಸಿದ್ದಾರೆ. 'ಪ್ರತಿ ಊರಿಲ್ಲಿ ದ್ರಾವಿಡ ಪಡೆ ಆರಂಭಿಸಿ; ಬಜರಂಗದಳದ ಕಾರ್ಯಕರ್ತರನ್ನು ಬದಲಿಸಿ, ಇಲ್ಲವೇ ಬಾರಿಸಿ’ ಎಂದು 'ಅಗ್ನಿ' ಶ್ರೀಧರ್ ಹೇಳುತ್ತಾರೆ. ಶ್ರೀಧರ್ ಅವರು ನನಗೆ ಚಲನಚಿತ್ರದಲ್ಲಿ ನಟಿಸಲು ಅವಕಾಶ ನೀಡಿದ್ದಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಆದರೆ, ಹಿಂಸಾಚಾರಕ್ಕೆ ಅವರ ಈ ಪ್ರಚೋದನೆಯನ್ನು ನಾನು ಬಲವಾಗಿ ವಿರೋಧಿಸುತ್ತೇನೆ ಎಂದಿದ್ದಾರೆ. 

ಭೂಗತ ಲೋಕದ (ಮಾಜಿ) ಡಾನ್‌ನಿಂದ ನಾವು ಎಂದಾದರೂ ಸಾಮಾಜಿಕ ಸದಾಚಾರ ಅಥವಾ ಅಹಿಂಸೆಯನ್ನು ನಿರೀಕ್ಷಿಸಬಹುದೇ? ಎಂದು ಚೇತನ್ ಪ್ರಶ್ನಿಸಿದ್ದಾರೆ.

ನಟ ಚೇತನ್ ಕುಮಾರ್ ಅವರು ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗಳ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ. 

'ಸ್ವಾತಂತ್ರ್ಯ ಹೋರಾಟಗಾರರ ಚಿಂತನೆಗಳನ್ನು ನಿಜವಾಗಿ ಅರ್ಥಮಾಡಿಕೊಳ್ಳಲು ಭಗತ್ ಸಿಂಗ್ ಅವರ 'ನಾನೇಕೆ ನಾಸ್ತಿಕ' ಓದಲು ಪ್ರಿಯಾಂಕ್ ಖರ್ಗೆ ಚಕ್ರವರ್ತಿ ಸೂಲಿಬೆಲೆಗೆ ಹೇಳಿದರು. ಆದರೆ, ಇತ್ತೀಚೆಗೆ ಪ್ರಿಯಾಂಕ್ ಖರ್ಗೆ ಅವರು 'ದೇವರ' ಮೇಲೆ ಪ್ರಮಾಣ ವಚನ ಸ್ವೀಕರಿಸಿದರು. ಇದು ವಿಪರ್ಯಾಸ. ಬಹುಶಃ ಖರ್ಗೆ ಅವರು ಕೂಡ ಭಗತ್ ಸಿಂಗ್ ಅವರ ಕೃತಿಯನ್ನೂ ಓದಬೇಕು. ಬಿಜೆಪಿ ಮತ್ತು ಕಾಂಗ್ರೆಸ್ ಪಠ್ಯಪುಸ್ತಕಗಳು (ಹ್ಯುಮಾನಟೀಸ್ & ಸೋಶಲ್ ಸೈನ್ಸಸ್) ದೋಷಪೂರಿತವಾಗಿವೆ ಎಂದು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.

ಅಗ್ನಿ ಶ್ರೀಧರ್ ಅವರು ತಮ್ಮ ಪ್ರಗತಿಪರ ಚಿಂತನೆಗೆ ಹೆಸರುವಾಸಿಯಾಗಿದ್ದಾರೆ. ಕರ್ನಾಟಕದಲ್ಲಿ ಆರ್‌ಎಸ್‌ಎಸ್ ವಿರುದ್ಧ ಜಾಗೃತಿ ಮೂಡಿಸಲು ಚುನಾವಣೆಗೂ ಮುನ್ನ ರಾಷ್ಟ್ರೀಯ ದ್ರಾವಿಡ ಸಂಘ (ಆರ್‌ಡಿಎಸ್) ಅನ್ನು ಪ್ರಾರಂಭಿಸಿದರು. 

ಜೈನ ಸಮುದಾಯದ ಕೆಲವು ಗೋಮಾಂಸವನ್ನು ವಿದೇಶಗಳಿಗೆ ರಫ್ತು ಮಾಡುವ ಮೂಲಕವೇ ವಾರ್ಷಿಕ 40 ಸಾವಿರ ಕೋಟಿ ವಹಿವಾಟು ನಡೆಸುತ್ತಿದ್ದಾರೆ  ಈ ಹಿಂದೆ ಅಗ್ನಿ ಶ್ರೀಧರ್ ಹೇಳಿಕೆ ನೀಡಿದ್ದರು.

ಗೋಮಾಂಸ ರಫ್ತು ಉದ್ಯಮದಲ್ಲಿ ಈ ಹಿಂದೆ ಮುಸ್ಲಿಂ ಸಮುದಾಯವು ದೊಡ್ಡ ಪಾಲನ್ನು ಹೊಂದಿತ್ತು. ಮುಸ್ಲಿಂರನ್ನು ಈ ಉದ್ಯಮದಿಂದ ಹೊರಗಿಡಲು ಆರ್‌ಎಸ್ಎಸ್ ಮತ್ತು ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸಿತು. ಈ ಹುನ್ನಾರದ ಹಿಂದೆ ಜೈನ ಸಮುದಾಯವಿದೆ ಎಂದು ದೂರಿದ್ದರು.

'ಶ್ರೀಮಂತ ಮುಸ್ಲಿಮರು ಗೋಮಾಂಸ ತಿನ್ನುವುದಿಲ್ಲ. ಆದರೆ, ಗೋಹತ್ಯೆಯ ವಿಚಾರ ಮುನ್ನೆಲೆಗೆ ಬಂದಾಗಲೆಲ್ಲಾ ಗೋಮಾಂಸವು ಮುಸ್ಲಿಂ ಸಮುದಾಯದ ಆಹಾರ ಎಂದು ಬಿಂಬಿಸಲಾಗುತ್ತಿದೆ. ಆದರೆ, ದಲಿತರು ಮತ್ತು ಕ್ರಿಶ್ಚಿಯನ್ನರು ಗೋಮಾಂಸವನ್ನು ಹೆಚ್ಚಾಗಿ ತಿನ್ನುತ್ತಾರೆ. ಅದರ ಬಗ್ಗೆ ಚರ್ಚೆಗಳು ನಡೆಯುತ್ತಿಲ್ಲ ಎಂದು ಅವರು ಹೇಳಿದರು. 

SCROLL FOR NEXT