ಹುಬ್ಬಳ್ಳಿ: ‘ರಾಜ್ಯದ 500 ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು, ಈ ಸಮಸ್ಯೆ ಪರಿಹರಿಸಲು ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕೆಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭಾನುವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 500 ಕ್ಕೂ ಹೆಚ್ಚು ಗ್ರಾಮಗಳು ಕುಡಿಯುವ ನೀರಿನ ತೀವ್ರ ಕೊರತೆಯಿಂದ ತತ್ತರಿಸುತ್ತಿವೆ. ಕಳೆದ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದೇನೆ. ರಾಜ್ಯದಲ್ಲಿ ಈ ವಾರವೂ ಮುಂಗಾರು ಮಳೆಯಾಗಿಲ್ಲ. ರಾಜ್ಯ ಬರಗಾಲಕ್ಕೆ ತುತ್ತಾಗಿದೆ. ಕುಡಿಯುವ ನೀರಿನ ಸಮಸ್ಯೆಗೆ ಸರಕಾರ ಮೊದಲ ಆದ್ಯತೆ ನೀಡಬೇಕು’’ ಎಂದು ಹೇಳಿದರು.
ಕೇವಲ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸುವುದರಿಂದ ಪ್ರಯೋಜನವಾಗುವುದಿಲ್ಲ. ಬಿಕ್ಕಟ್ಟು ಪೀಡಿತ ಪ್ರದೇಶಗಳಲ್ಲಿ ಕಾರ್ಯಪಡೆಯನ್ನು ಸ್ಥಾಪಿಸಬೇಕು ಮತ್ತು ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ.
ಅನ್ನಭಾಗ್ಯ ಯೋಜನೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅಕ್ಕಿ ವಿಷಯವಾಗಿ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಿತ್ತು. ಈಗ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಎಂಬ ಕುಂಟು ನೆಪ ಹೇಳುತ್ತಿರುವುದು ಸರಿಯಲ್ಲ. ಇದು ಕಾಂಗ್ರೆಸ್ ಸರ್ಕಾರ ‘ಗ್ಯಾರಂಟಿ’ಯಿಂದ ಹಿಂದೆ ಸರಿದಂತೆ ಅರ್ಥ’ ಎಂದು ಟೀಕಿಸಿದರು.
‘ರಾಜ್ಯದ ರೈತರು ಅಕ್ಕಿ ಕೊಡಲು ಮುಂದೆ ಬಂದರೆ ಅದನ್ನು ಖರೀದಿಸಬೇಕು. ಬಿಜೆಪಿಯವರೇ ಕೇಂದ್ರದಿಂದ ಅಕ್ಕಿ ಕೊಡಿಸಬೇಕು ಎನ್ನುವುದು ಸರಿಯಲ್ಲ. ಒಂದನೇ ತಾರೀಖಿಗೆ ಅಕ್ಕಿ ಕೊಡದಿದ್ದರೆ, ಪ್ರತಿಭಟನೆ ಮಾಡುತ್ತೇವೆ’ ಎಂದರು.