ರಾಜ್ಯ

ಉಡುಪಿ: 40 ಅಡಿ ಬಾವಿಗಿಳಿದು ಬೆಕ್ಕಿನ ಮರಿ ರಕ್ಷಿಸಿದ ಪೇಜಾವರ ಸ್ವಾಮೀಜಿ!

Shilpa D

ಉಡುಪಿ: ಪೇಜಾವರ ಮಠದ  ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಬಾವಿಗೆ ಬಿದ್ದಿದ್ದ ಬೆಕ್ಕಿನ ಮರಿಯನ್ನು ಸ್ವತಃ ಬಾವಿಗೆ ಇಳಿದು ರಕ್ಷಿಸಿದ ಘಟನೆ ನಡೆದಿದೆ.

ಸುಮಾರು 40 ಅಡಿ ಆಳದ ಬಾವಿಗೆ ಬೆಕ್ಕಿನ ಮರಿಯೊಂದು ಬಿದ್ದು ಅಳತೊಡಗಿತ್ತು. ಇದರ ಆಕ್ರಂದನ ಕೇಳಿ ಸ್ವತಃ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಬಾವಿಗೆ ಇಳಿದು ಮರಿಯನ್ನು ರಕ್ಷಿಸಿದ್ದಾರೆ. ಉಡುಪಿಯ ಮುಚ್ಲುಕೋಡು ಸುಬ್ರಮಣ್ಯ ದೇವಾಲಯದಲ್ಲಿ ಈ ಘಟನೆ ನಡೆದಿದೆ.

ಉಡುಪಿ ಸಮೀಪದ ಮುಚ್ಲುಕೋಡು ಶ್ರೀ ಸುಬ್ರಮಣ್ಯ ದೇವಾಲಯಕ್ಕೆ ಸ್ವಾಮೀಜಿ ಭೇಟಿ ನೀಡಿದ್ದರು. ಈ ಸಂದರ್ಭ ಬಾವಿಗೆ ಬೆಕ್ಕೊಂದು ಬಿದ್ದಿರುವ ಬಗ್ಗೆ ದೇವಾಲಯದ ಸಿಬ್ಬಂದಿ ಮಾಹಿತಿ ನೀಡಿದರು. ತಕ್ಷಣ ಸ್ವಾಮೀಜಿ ಅವರು ಬಾವಿಯ ನೀರು ಸೇದುವ ಹಗ್ಗವನ್ನು ಹಿಡಿದುಕೊಂಡು ಸುಮಾರು 40 ಅಡಿ ಆಳದ, 4-5 ಅಡಿ ಅಗಲದ ಕಲ್ಲು ಕಟ್ಟಿರುವ ಬಾವಿಗೆ ಇಳಿದೇಬಿಟ್ಟರು.

ನಂತರ ಕೈಗೆ ಬಟ್ಟೆಯೊಂದನ್ನು ಗ್ಲೌಸ್‌ನಂತೆ ಸುತ್ತಿಕೊಂಡರು. ಜೀವದಾಸೆಗೆ ಬಾವಿಯೊಳಗೆ ಕಲ್ಲಿನ ಅಟ್ಟೆಮೇಲೆ ಕುಳಿತಿದ್ದ ಬೆಕ್ಕನ್ನು ಜಾಗ್ರತೆಯಿಂದ ಹಿಡಿದು ಹಗ್ಗಕ್ಕೆ ಕಟ್ಟಿದ್ದ ಬಕೆಟ್‌ಗೆ ಹಾಕಿದರು. ಸಿಬ್ಬಂದಿ ಬಕೆಟ್‌ನ್ನು ಅರ್ಧಕ್ಕೆ ಎಳೆಯುವಷ್ಟರಲ್ಲಿ ಬೆಕ್ಕು ಹೆದರಿ ಪುನಃ ಬಾವಿಗೆ ಹಾರಿತು. ಪುನಃ ಒಂದು ಕೈಯಲ್ಲಿ ಬೆಕ್ಕನ್ನು ಹಿಡಿದು, ಇನ್ನೊಂದು ಕೈಯಲ್ಲಿ ಹಗ್ಗವನ್ನು ಹಿಡಿದ ಸರ್ಕಸ್‌ನಂತೆ ಸಾಹಸದಿಂದ ಬಾವಿಯಿಂದ ಮೇಲಕ್ಕೆ ಬಂದು, ಬೆಕ್ಕನ್ನು ರಕ್ಷಿಸಿದರು. ಪೇಜಾವರ ಶ್ರೀಗಳ ಈ ಮಾನವೀಯ ಸಾಹಸದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಪ್ರಚಾರ ಪಡೆದಿದ್ದು, ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

SCROLL FOR NEXT