ರಾಜ್ಯ

ಬೆಂಗಳೂರು: 4ನೇ ತರಗತಿ ವಿದ್ಯಾರ್ಥಿಗೆ 43 ಬಾರಿ ಥಳಿಸಿದ ಶಿಕ್ಷಕಿ ವಿರುದ್ಧ ಎಫ್ಐಆರ್ ದಾಖಲು!

Manjula VN

ಬೆಂಗಳೂರು: ವೈಟ್‌ಫೀಲ್ಡ್‌ನ ಕಾಡುಗೋಡಿಯ ಖಾಸಗಿ ಶಾಲೆಯೊಂದರ 4ನೇ ತರಗತಿ ವಿದ್ಯಾರ್ಥಿಗೆ 43 ಬಾರಿ ಥಳಿಸಿ ಗಾಯಗೊಳಿಸಿದ ಶಿಕ್ಷಕಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಶಿಕ್ಷಕಿಯ ಥಳಿತದಿಂದ ವಿದ್ಯಾರ್ಥಿಯ ಮುಖ ಮತ್ತು ದೇಹದ ಮೇಲೆ ನೀಲಿ ಬಣ್ಣದ ಗುರುತುಗಳಾಗಿದ್ದು, ಈ ಸಂಬಂಧ ಬಾಲಕನ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಶಿಕ್ಷಕಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಕ್ಕಳ ಆರೈಕೆ ಮತ್ತು ರಕ್ಷಣೆ ಕಾಯಿದೆ, 2015 ರ ಅಡಿಯಲ್ಲಿ ಶಿಕ್ಷಕಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಬಾಲಕನ ತಂಗಿ ಕೂಡ ಅದೇ ಶಾಲೆಯಲ್ಲಿ ಓದುತ್ತಿದ್ದಾಳೆ. ಘಟನೆಗೂ ಎರಡು ದಿನಗಳ ಹಿಂದೆ ಪೋಷಕರಿಗೆ ದೂರವಾಣಿ ಕರೆ ಮಾಡಿರುವ ಶಿಕ್ಷಕರು ಹೋಮ್ ವರ್ಕ್ ಮಾಡಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ಪೋಷಕರು ಡೈರಿಯಲ್ಲಿ ಬರೆದು ಕಳುಹಿಸುವಂತೆ ತಿಳಿಸಿದ್ದಾರೆ. ಈ ವಿಚಾರವಾಗಿ ಪೋಷಕರು ಹಾಗೂ ಶಿಕ್ಷಕಿಯ ನಡುವೆ ವೈಮನಸ್ಸು ಶುರುವಾಗಿದೆ. ಪೋಷಕರು ಹಾಗೂ ಶಿಕ್ಷಕಿಯ ನಡುವಿವ ವೈಮನಸ್ಸು ಬಾಲಕನ ಮೇಲೆ ಪರಿಣಾಮ ಬೀರುವಂತೆ ಮಾಡಿದೆ.

ನಾನೂ ಒಬ್ಬ ಶಿಕ್ಷಕ. ಮಕ್ಕಳು ಶಿಸ್ತು ಪಾಲನೆ ಮಾಡದಿದ್ದಾಗ ಏನಾಗುತ್ತದೆ ಎಂಬುದು ನನಗೂ ತಿಳಿದಿದೆ. ಮಗುವಿನ ಮೈ ಮುಖದ ಮೇಲೆ ನೀಲಿ ಗುರುತುಗಳು ಕಂಡು ಬಂದ ಬಳಿಕ ಪ್ರಾಂಶುಪಾಲರಿಗೆ ದೂರು ನೀಡಲಾಯಿತು. ಬಳಿಕ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದಾಗ ಶಿಕ್ಷಕಿ 30 ನಿಮಿಷಗಳ ಕಾಲ 43 ಬಾರಿ ಹೊಡೆದಿರುವುದು ಕಂಡು ಬಂದಿತು ಎಂದು ಬಾಲಕನ ತಂದೆ ಹೇಳಿದ್ದಾರೆ.

ಶಾಲಾ ಆಡಳಿತ ಮಂಡಳಿ ಪ್ರತಿಕ್ರಿಯೆ ನೀಡಿ, ದೂರಿನ ಬಳಿಕ ಶಿಕ್ಷಕಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ತಿಳಿಸಿದೆ.

SCROLL FOR NEXT