ಬೆಂಗಳೂರು: ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿ ಬಳಿಕ ಸರ್ಕಾರಿ ಬಸ್ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ದುಪ್ಪಟ್ಟಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಇಂದು ಶಾಂತಿನಗರದಲ್ಲಿರುವ ಕೆಎಸ್ಆರ್ಟಿಸಿ ಕೇಂದ್ರ ಕಚೇರಿಯಲ್ಲಿ ವಿವಿಧ ಸಾರಿಗೆ ಇಲಾಖೆಗಳ ಎಂಡಿಗಳ ಜೊತೆ ರಾಮಲಿಂಗಾ ರೆಡ್ಡಿ ಅವರು ಸಭೆ ನಡೆಸಿದರು. ನಂತರ ಮಾತನಾಡಿದ್ದು ಶಕ್ತಿ ಯೋಜನೆ ಯಶಸ್ವಿಯಾಗಿದೆ. ಶಕ್ತಿ ಯೋಜನೆ ಜಾರಿಗೂ ಮೊದಲು 84.15 ಲಕ್ಷ ಜನರ ಪ್ರಯಾಣ ಮಾಡುತ್ತಿದ್ದರು. ಇಂದು ಒಂದೇ ದಿನ 1.05 ಕೋಟಿ ಮಂದಿ ಪ್ರಯಾಣ ಮಾಡಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದಿರುವ ಶಕ್ತಿ ಯೋಜನೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಸಚಿವ ರಾಮಲಿಂಗಾ ರೆಡ್ಡಿ ಅವರು, ಈ ಯೋಜನೆಯಿಂದ ಸಾರ್ವಜನಿಕ ಸಾರಿಗೆಗೆ ಬಲ ನೀಡಿದಂತಾಗಿದೆ. ಈ ಯೋಜನೆ ಜಾರಿಗೆ ಮೊದಲು ಸಾರಿಗೆ ಸಂಸ್ಥೆಗಳ ಒಟ್ಟು ಪ್ರಯಾಣಿಕರ ಸಂಖ್ಯೆ ಪ್ರತಿದಿನ ಸರಾಸರಿ 84.15 ಲಕ್ಷಗಳಿದ್ದು, ಇಂದು ಸರಾಸರಿ 1 ಕೋಟಿ 5 ಲಕ್ಷಗಳಾಗಿರುವುದು ಶಕ್ತಿ ಯೋಜನೆ ಯಶಸ್ವಿಯಾಗಿದೆ ಎಂಬುದನ್ನು ತೋರಿಸುತ್ತದೆ ಎಂದರು.