ರಾಜ್ಯ

ಶಕ್ತಿ ಯೋಜನೆ: ಮಹಿಳಾ ಪ್ರಯಾಣಿಕರೊಂದಿಗೆ ದುರ್ವರ್ತನೆ ತೋರಿದರೆ ಶಿಸ್ತು ಕ್ರಮ; ಸಾರಿಗೆ ಇಲಾಖೆ ಎಚ್ಚರಿಕೆ

Manjula VN

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದ ಮಹಾತ್ವಾಕಾಂಕ್ಷೆಯ ಶಕ್ತಿ ಯೋಜನೆ ಜೂನ್ 11 ರಂದು ಜಾರಿಗೆ ಬಂದಿದ್ದು, ಮಹಿಳೆಯರು ಸಂತಸದಿಂದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ. ಯೋಜನೆ ಜಾರಿಯಾದ ಬಳಿಕ ಮಹಿಳೆಯರೊಂದಿಗೆ ಬಸ್ ಗಳ ನಿರ್ವಾಹಕರು, ಚಾಲಕರು ದುರ್ವರ್ತನೆ ತೋರುತ್ತಿರುವ ಘಟನೆಗಳು ವರದಿಯಾಗುತ್ತಲೇ ಇದ್ದು, ಈ ಕುರಿತು ಸಾರಿಗೆ ಇಲಾಖೆ ಎಚ್ಚರಿಕೆಯೊಂದನ್ನು ನೀಡಿದೆ.

ಉಚಿತವಾಗಿ ಪ್ರಯಾಣಿಸುವ ಮಹಿಳೆಯರೊಂದಿಗೆ ಅಗೌರವದಿಂದ ನಡೆದುಕೊಂಡ ದೂರುಗಳು ಬಂದಿದ್ದೇ ಆದರೆ, ಅಂತರ ಬಸ್ ನಿರ್ವಾಹಕ ಅಥವಾ ಚಾಲಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆ ಸುತ್ತೋಲೆ ಹೊರಡಿಸಿದೆ.

ಶಕ್ತಿ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ನಿಗಮದ ಚಾಲನಾ ಸಿಬ್ಬಂದಿ ಪರಿಶ್ರಮ ಹೆಚ್ಚಿನ ಮಟ್ಟದಲ್ಲಿದೆ. ಆದರೆ, ಕೆಲವೊಂದು ಅಹಿತಕರ ಘಟನೆಗಳು ಈ ಮಹತ್ವದ ಯೋಜನೆಯ ಬಗ್ಗೆ ಭಿನ್ನಾಭಿಪ್ರಾಯಗಳು ಮೂಡುವಂತೆ ಮಾಡುತ್ತಿದೆ. ಚಾಲನಾ ಸಿಬ್ಬಂದಿಗಳು ನಿಗಮದ ಸಾರಿಗೆಗಳಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸಬೇಕು. ಈ ಬಗ್ಗೆ ಮಹಿಳಾ ಪ್ರಯಾಣಿಕರಿಂದ ಯಾವುದೇ ದೂರುಗಳಿಗೆ ಅವಕಾಶ ನೀಡದಂತೆ ಕರ್ತವ್ಯ ನಿರ್ವಹಿಸಬೇಕು.

ಮಹಿಳೆಯರು ಇರುವ ಬಸ್ ನಿಲ್ದಾಣ/ಬಸ್ ನಿಲುಗಡೆ ಸ್ಥಳಗಳಲ್ಲಿ ಬಸ್‌ ನಿಲ್ಲಿಸದೇ ಇರುವುದು ಅಥವಾ ಮಹಿಳಾ ಪ್ರಯಾಣಿಕರಿಗೆ ಉಚಿತವಾಗಿ ಪ್ರಯಾಣಿಸುವ ಕುರಿತು ಅಪಹಾಸ್ಯ ಮಾಡುವುದು, ಇನ್ನಿತರೆ ರೀತಿಯಲ್ಲಿ ಮಹಿಳೆಯರೊಂದಿಗೆ ಅಗೌರವದಿಂದ ನಡೆದುಕೊಳ್ಳುತ್ತಿರುವ ಪ್ರಕರಣಗಳ ಘಟನೆಗಳು ಬೆಳಕಿಗೆ ಬಂದಿವೆ. ಈ ರೀತಿ ಘಟನೆಗಳು ಮತ್ತೆ ಮರುಕಳಿಸಬಾರದು. ಒಂದು ವೇಳೆ ಅನುಚಿತವಾಗಿ ಮಹಿಳೆಯರೊಂದಿಗೆ ವರ್ತಿಸುವುದು ಅಪಹಾಸ್ಯ ಮಾಡುತ್ತಿರುವ ಬಗ್ಗೆ ದೂರು ಬಂದರೆ ಅಂತಹ ವ್ಯಕ್ತಿಗಳ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದೆ.

“ಮಹಿಳೆಯರಿಗೆ ವಿತರಿಸುವ ಟಿಕೇಟ್ ಮೊತ್ತವನ್ನು ಸಾರಿಗೆ ಆದಾಯವೆಂದು ಪರಿಗಣಿಸಲಾಗುತ್ತಿದೆ. ಈ ಹಿನ್ನೆಲೆ, ನಿಗಮದ ಚಾಲಕ ಮತ್ತು ನಿರ್ವಾಹಕರುಗಳು ನಿಗದಿತ ಎಲ್ಲ ಬಸ್ ನಿಲ್ದಾಣ/ಬಸ್ ನಿಲುಗಡೆ ಸ್ಥಳಗಳಲ್ಲಿ ನಿಲುಗಡೆ ನೀಡಿ, ಪ್ರಯಾಣಿಕರನ್ನು ವಿಶೇಷವಾಗಿ ಮಹಿಳೆಯರು/ವಿದ್ಯಾರ್ಥಿಗಳನ್ನು ಹತ್ತಿಸಿ/ಇಳಿಸಬೇಕು” ಎಂದು ತಿಳಿಸಿದೆ.

SCROLL FOR NEXT