ರಾಜ್ಯ

ಹಂಪಿಯ ಪಾರಂಪರಿಕ ಪ್ರದೇಶದಲ್ಲಿ ಒಂದೇ ವಾರದಲ್ಲಿ 17 ರೆಸಾರ್ಟ್‌, ರೆಸ್ಟೋರೆಂಟ್‌ಗಳು ನೆಲಸಮ

Ramyashree GN

ಹುಬ್ಬಳ್ಳಿ: ಪಾರಂಪರಿಕ ಪ್ರದೇಶವಾದ ಹಂಪಿ ಸುತ್ತಮುತ್ತಲಿನ 17 ರೆಸಾರ್ಟ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ಕಳೆದ ಒಂದು ವಾರದಿಂದ ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ. ಈ ಎಲ್ಲಾ ರೆಸಾರ್ಟ್‌ಗಳಿಗೆ ಮೂರು ತಿಂಗಳ ಹಿಂದೆ ನೋಟಿಸ್ ನೀಡಿದ್ದರೂ ಸಹ ಚಾಲನೆಯಲ್ಲಿದ್ದವು.

ಈ ಎಲ್ಲಾ ರೆಸಾರ್ಟ್ಸ್ ಮತ್ತು ರೆಸ್ಟೋರೆಂಟ್ಸ್‌ಗಳನ್ನು ಯುನೆಸ್ಕೋ-ರಕ್ಷಿತ ವಲಯ ಮತ್ತು ಬಫರ್ ಪ್ರದೇಶಗಳಲ್ಲಿ ನಡೆಸುತ್ತಿದ್ದರು. ಕೊಪ್ಪಳದ ಸಣಾಪುರ, ಆನೆಗುಂದಿ ಹಾಗೂ ವಿಜಯನಗರ ಜಿಲ್ಲೆಯ ಕಮಲಾಪುರ, ಕಡ್ಡಿರಾಂಪುರ ಭಾಗದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಹೋಮ್‌ಸ್ಟೇಗಳು, ರೆಸಾರ್ಟ್‌ಗಳು ಮತ್ತು ಹೋಟೆಲ್‌ಗಳಲ್ಲದೆ, ಅನೇಕ ಮನೆಗಳ ಮುಂದೆ ನಿರ್ಮಿಸಲಾಗಿದ್ದ ಹಲವಾರು ಆತಿಥ್ಯ ಕಟ್ಟಡಗಳನ್ನು ಸಹ ನೆಲಸಮ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಹಳ್ಳಿಯೊಂದರಲ್ಲಿ ಸರ್ಕಾರ ಈಗಾಗಲೇ ಪರ್ಯಾಯ ಭೂಮಿಯನ್ನು ನೀಡಿದೆ ಮತ್ತು ಪ್ರವಾಸೋದ್ಯಮ ವಲಯವನ್ನು ಯೋಜಿಸಿದೆ.

2 ವರ್ಷಗಳಲ್ಲಿ 40 ಕಟ್ಟಡಗಳು ನೆಲಸಮ

ಇಷ್ಟಾದರೂ ಅನೇಕ ರೆಸಾರ್ಟ್ ಮಾಲೀಕರು ಇನ್ನೂ ಎಚ್ಚೆತ್ತುಕೊಂಡಿಲ್ಲ. ಬದಲಿಗೆ, ಅವರು ಮತ್ತಷ್ಟು ನೆಲಸಮ ಕಾರ್ಯಾಚರಣೆಯ ವಿರುದ್ಧ ತಡೆಯಾಜ್ಞೆ ತರಲು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇಲ್ಲಿಯವರೆಗೆ, ಕಳೆದ ಎರಡು ವರ್ಷಗಳಲ್ಲಿ ಸುಮಾರು 40 ಕಟ್ಟಡಗಳನ್ನು ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ. ಇತ್ತೀಚೆಗಷ್ಟೇ ಗ್ರಾಮಸ್ಥರು ಹಾಗೂ ರೆಸಾರ್ಟ್ ಮಾಲೀಕರು ಕಟ್ಟಡ ಕೆಡವಿದ ಸ್ಥಳದಲ್ಲಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದರು.

'ಹೆಚ್ಚಿನ ಹೋಂಸ್ಟೇಗಳು ಮತ್ತು ಆತಿಥ್ಯ ಕಟ್ಟಡಗಳು ತಾತ್ಕಾಲಿಕವಾಗಿದ್ದು, ಪ್ರಪಂಚದಾದ್ಯಂತ ಪ್ರವಾಸಿಗರನ್ನು ಆಕರ್ಷಿಸಿದವು. ಮೊದಲಿನಂತೆ ಸ್ಥಳೀಯರಿಗೆ ನಮ್ಮ ವ್ಯಾಪಾರ ನಡೆಸಲು ಸಾಕಷ್ಟು ಸ್ಥಳಾವಕಾಶವಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಮಾಡಬೇಕು' ಎಂದು ಸಣಾಪುರದ ರೆಸಾರ್ಟ್ ಮಾಲೀಕರು ಹೇಳಿದರು.

ನೆಲಸಮವಾಗಿರುವ ಎಲ್ಲ ರೆಸಾರ್ಟ್‌ಗಳಿಗೆ ಮೂರು ತಿಂಗಳ ಹಿಂದೆಯೇ ನೋಟಿಸ್‌ ನೀಡಲಾಗಿದೆ ಎಂದು ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. 

'ಪೊಲೀಸರ ಸಹಾಯದಿಂದ ಕಾರ್ಯಾಚರಣೆ ನಡೆಸಲಾಗಿದೆ. ಕೆಡವಲಾದ ಎಲ್ಲಾ ಕಟ್ಟಡಗಳು ಹಂಪಿ ಪಾರಂಪರಿಕ ವಲಯದ ಭಾಗವಾಗಿತ್ತು. ಕಾನೂನಿನ ಪ್ರಕಾರ, ಈ ಪ್ರದೇಶಗಳಲ್ಲಿ ಯಾವುದೇ ನಿರ್ಮಾಣಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದರು.

SCROLL FOR NEXT