ರಾಜ್ಯ

ಒತ್ತುವರಿ ವಿರುದ್ಧ ಕ್ರಮ: ಅರಣ್ಯ, ಕಂದಾಯ ಇಲಾಖೆ ಜಂಟಿ ಸಮೀಕ್ಷೆ- ಸಚಿವ ಈಶ್ವರ್ ಖಂಡ್ರೆ

Manjula VN

ಬೆಂಗಳೂರು: ರಾಜ್ಯದ ಹಲವೆಡೆ ಅರಣ್ಯ ಭೂಮಿ ಒತ್ತುವರಿ ಆಗಿದ್ದು, ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಅವುಗಳನ್ನೆಲ್ಲ ತೆರವು ಮಾಡಲಾಗುವುದು. ಇದಕ್ಕಾಗಿ ಅರಣ್ಯ ಮತ್ತು ಕಂದಾಯ ಇಲಾಖೆಯು ಜಂಟಿ ಸಮೀಕ್ಷೆ ಮಾಡಿ, ವರದಿಯನ್ನು ಶೀಘ್ರದಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ್​ ಖಂಡ್ರೆ ಅವರು ಸೋಮವಾರ ಹೇಳಿದರು.

ವಿಧಾನ ಸೌಧದಲ್ಲಿಂದು ಕರ್ನಾಟಕ ಅರಣ್ಯ ಇಲಾಖೆಯ ಹೊಸ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಅವರು, ಮುಂದಿನ ಮೂರು ತಿಂಗಳಿನಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆ ಸೇರಿ ಜಂಟಿ ಸಮೀಕ್ಷೆ ನಡೆಸಲು ನಿರ್ಧರಿಸಿವೆ. ಈ ಜಂಟಿ ಸಮೀಕ್ಷೆಯ ವರದಿಯನ್ನು ರಾಜ್ಯ ಸರ್ಕಾರದ ಸಹಿತ ಕೇಂದ್ರ ಹಾಗೂ ಸುಪ್ರೀಂ ಕೋರ್ಟಿಗೂ ಸಲ್ಲಿಸುತ್ತೇವೆಂದು ಹೇಳಿದರು.

ಕಳೆದ ವರ್ಷ 51 ಜನ ಆನೆ ಮತ್ತು ಇತರೆ ಪ್ರಾಣಿಗಳ ದಾಳಿಯಿಂದ ಸಾವನ್ನಪ್ಪಿದ್ದಾರೆ. ಮಾನವ-ಪ್ರಾಣಿ ಸಂಘರ್ಷವನ್ನು ತಡೆಗಟ್ಟಲು ಶೀಘ್ರದಲ್ಲೇ ರಾಮನಗರ-ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ‘ಆನೆ ಕಾರ್ಯಪಡೆ’ ಆರಂಭಿಸಲಾಗವುದು. ರಾಜ್ಯದಲ್ಲಿ ಈಗಾಗಲೇ ಐದು ಕಡೆ ಆನೆ ಕಾರ್ಯಪಡೆ ಕಾರ್ಯಾಚರಿಸುತ್ತಿದೆ ಎಂದು ಮಾಹಿತಿ ನೀಡಿದರು.

ನಾನು ಇಲಾಖೆಯ ಸಚಿವನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನಾಲ್ಕು ಜನ ಸಾವಿಗೀಡಾಗಿದ್ದಾರೆ. ಮೃತಪಟ್ಟವರ ಕುಟುಂಬಕ್ಕೆ 15 ಲಕ್ಷ ರೂ ಪರಿಹಾರ ಮತ್ತು ತಿಂಗಳಿಗೆ 4 ಸಾವಿರ ಮಾಸಾಶನವನ್ನು 5 ವರ್ಷಗಳವರೆಗೆ ನೀಡಲಾಗುವುದು ಎಂದು ಹೇಳಿದರು.

ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ವಿಚಾರವ ಕುರಿತು ಮಾತನಾಡಿ, “335 ಹುದ್ದೆಗಳಿಗೆ ಅನುಮೋದನೆ ಸಿಕ್ಕಿದೆ. ಉಳಿದಂತೆ ಖಾಲಿ ಇರುವ ಹುದ್ದೆಗಳ ಬಗ್ಗೆ ವರದಿ ಕೇಳಿದ್ದೇವೆ. ಅದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.

ಮಾನವ ಮತ್ತು ಕಾಡುಮೃಗಗಳ ನಡುವಿನ ಸಂಘರ್ಷ ಸಹ ದೊಡ್ಡ ಸವಾಲಾಗಿದೆ. ರಾಜ್ಯದಲ್ಲಿ 2022-23ನೇ ಸಾಲಿನಲ್ಲಿ ವನ್ಯಮೃಗ ದಾಳಿಯಿಂದ 51 ಸಾವು ಸಂಭವಿಸಿದ್ದು, ಇದರಲ್ಲಿ 29 ಸಾವು ಆನೆಗಳಿಂದಲೇ ಆಗಿದೆ. ಆನೆಗಳು ನಾಡಿಗೆ ಬರುವುದರಿಂದ ಅಪಾಯ ಹೆಚ್ಚಿದ್ದು, ರಾಜ್ಯದಲ್ಲಿ ಸುಮಾರು 641 ಕಿ.ಮೀ. ರೈಲ್ವೆ ಬ್ಯಾರಿಕೇಡ್‌ ಅಳವಡಿಸಲು ಯೋಜನೆ ರೂಪಿಸಲಾಗಿದೆ. ಈ ಪೈಕಿ 310 ಕಿ.ಮೀ. ಪೂರ್ಣವಾಗಿದೆ. ಒಂದು ಕಿ.ಮೀ. ರೈಲ್ವೆ ಬ್ಯಾರಿಕೇಡ್‌ ಮಾಡಲು 1.5 ಕೋಟಿ ವೆಚ್ಚವಾಗುತ್ತದೆ. ಉಳಿದ ಕಾಮಗಾರಿ ಮಾಡಲು ಬಜೆಟ್‌ನಲ್ಲಿ ಹೆಚ್ಚಿನ ಹಣ ಕೋರಲಾಗಿದೆ. ಮೂರು ವರ್ಷದಲ್ಲಿ ಈ ಕಾಮಗಾರಿ ಪೂರ್ಣಗೊಳಿಸಲು ಕಾಲಮಿತಿ ಹಾಕಿಕೊಳ್ಳಲಾಗಿದೆ ಎಂದು ವಿವರಿಸಿದರು.

SCROLL FOR NEXT