ರಾಜ್ಯ

ಬೀದಿ ನಾಯಿಗಳ ನಿರ್ವಹಣೆ, ಪ್ರಾಣಿಗಳ ಹೊಸ ಚಿತಾಗಾರ ನಿರ್ಮಾಣಕ್ಕೆ ಬಿಬಿಎಂಪಿ ಬಜೆಟ್ ನಲ್ಲಿ ಹಣ ಮೀಸಲು: ಪ್ರಾಣಿಪ್ರಿಯರ ಸಂತಸ

Manjula VN

ಬೆಂಗಳೂರು: ಬೀದಿ ನಾಯಿಗಳಿಗೆ ಫೈವ್ ಇನ್ ಒನ್ ಆ್ಯಂಟಿ ರೇಬಿಸ್ ಲಸಿಕೆ ನೀಡಲು ರೂ.20 ಕೋಟಿ ಮತ್ತು ಪ್ರಾಣಿಗಳಿಗೆ ಎರಡು ವಿದ್ಯುತ್ ಚಿತಾಗಾರಗಳನ್ನು ಸ್ಥಾಪಿಸಲು 5 ಕೋಟಿ ರೂಪಾಯಿ ಮೀಸಲಿಟ್ಟ ಬಿಬಿಎಂಪಿ ಬಜೆಟ್‌ನ್ನು ಪ್ರಾಣಿ ಪ್ರಿಯರು ಸ್ವಾಗತಿಸಿದ್ದಾರೆ.

ಪ್ರಾಣಿ ಹಕ್ಕುಗಳ ಕಾರ್ಯಕರ್ತ ಅರುಣ್ ಪ್ರಸಾದ್ ಅವರು ಮಾತನಾಡಿ, 'ಕಾನೈನ್ ಕೋರ್ ಲಸಿಕೆ' (ಆ್ಯಂಟಿ ರೇಬಿಸ್ ಲಸಿಕೆ) ಘೋಷಿಸಿದ ದೇಶದ ಮೊದಲ ಪಾಲಿಕೆ ಎಂದರೆ ಅದು ಬಿಬಿಎಂಪಿಯಾಗಿದೆ ಎಂದು ಹೇಳಿದ್ದಾರೆ.

“2019 ರ ನಾಯಿ ಗಣತಿಯ ಪ್ರಕಾರ, ಬೆಂಗಳೂರಿನಲ್ಲಿ ಸುಮಾರು 2.45 ಲಕ್ಷ ಬೀದಿ ನಾಯಿಗಳಿವೆ. ಈ ನಾಯಿಗಳು ಲೆಪ್ಟೊಸ್ಪಿರೋಸಿಸ್, ಪಾರ್ವೊವೈರಸ್ ಮತ್ತು ಇತರ ಭಯಾನಕ ವೈರಲ್ ಸೋಂಕುಗಳಿಗೆ ಗುರಿಯಾಗುತ್ತಿವೆ. ಬೀದಿ ನಾಯಿಗಳ ಜೀವಿತಾವಧಿ ಸುಮಾರು 15 ವರ್ಷಗಳು. ಆದರೆ, ಇವುಗಳಿಗೆ ಸೋಂಕು ತಗುಲಿದರೆ ಒಂದು ವರ್ಷದಲ್ಲಿ ಸಾಯುತ್ತವೆ. ‘ಕೆನೈನ್ ಕೋರ್ ಲಸಿಕೆ’ಯಿಂದ ಬೀದಿನಾಯಿಗಳ ಸಾವುಗಳನ್ನು ತಡೆಯಬಹುದು ಎಂದು ಪ್ರಸಾದ್ ತಿಳಿಸಿದ್ದಾರೆ. ಇದೇ ವೇಳೆ ಪ್ರಾಣಿಗಳಿಗೆ ಎರಡು ವಿದ್ಯುತ್ ಸ್ಮಶಾನಗಳ ನಿರ್ಮಾಣ ನಿರ್ಧಾರವನ್ನೂ ಅವರು ಸ್ವಾಗತಿಸಿದ್ದಾರೆ.

ಬೆಂಗಳೂರಿನಂತಹ ದೊಡ್ಡ ನಗರದಲ್ಲಿ ಪ್ರಾಣಿಗಳಿಗಾಗಿ ಸುಮನಹಳ್ಳಿಯಲ್ಲಿ ಒಂದೇ ಒಂದು ಸ್ಮಶಾನವಿದೆ. ನಗರಕ್ಕೆ ಅನೇಕ ಸ್ಮಶಾನಗಳ ಅಗತ್ಯವಿದೆ, ”ಎಂದು ಅವರು ಹೇಳಿದರು.

ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಲು, ಬೀದಿ ನಾಯಿಗಳ ಸಂತಾನಹರಣ ಮಾಡುವ ಸಂಖ್ಯೆಯನ್ನು ದ್ವಿಗುಣಗೊಳಿಸುವ ಗುರಿಯನ್ನು ಬಜೆಟ್ ಹೊಂದಿದೆ.

SCROLL FOR NEXT