ರಾಜ್ಯ

ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಪುತ್ರನ 'ಲಂಚಾವತಾರ': ದಾಳಿ ಬಗ್ಗೆ ಲೋಕಾಯುಕ್ತ ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದೇನು?

Sumana Upadhyaya

ಬೆಂಗಳೂರು: ದಾವಣಗೆರೆ ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ (BJP MLA Madal Virupakshappa)  ಪುತ್ರ ಬೆಂಗಳೂರಿನಲ್ಲಿ ಬಿಡಬ್ಲ್ಯುಎಸ್ ಎಸ್ ಬಿ ಮುಖ್ಯ ಲೆಕ್ಕಾಧಿಕಾರಿಯಾಗಿರುವ ಮಾಡಾಳ್ ಪ್ರಶಾಂತ್​ ನಿನ್ನೆ ತಮ್ಮ ಕಚೇರಿಯಲ್ಲಿ ಕೆಎಸ್ ಡಿಎಲ್ ಟೆಂಡರ್ ಗೆ ಸಂಬಂಧಪಟ್ಟಂತೆ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಸಿಬ್ಬಂದಿಯ ಬಲೆಗೆ ಸಿಕ್ಕಿಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಮುಖ್ಯ ನಾಯಮೂರ್ತಿ ಬಿ.ಎಸ್. ಪಾಟೀಲ್ (Lokayukta Chief Justice BS Patil) ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ನಿನ್ನೆ ಅವರ ಕಚೇರಿಯಲ್ಲಿ ನಡೆಸಿದ ಶೋಧ ಕಾರ್ಯಾಚರಣೆ ವೇಳೆ 2 ಕೋಟಿ 2 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ. 6 ಕೋಟಿ 10 ಲಕ್ಷ ರೂಪಾಯಿ ಅವರ ಮನೆಯಲ್ಲಿ ಸಿಕ್ಕಿದೆ. 8 ಕೋಟಿಗೂ ಅಧಿಕ ನಗದು ಪತ್ತೆಯಾಗಿದೆ. ಈಗ ತನಿಖೆ ನಡೆಯುತ್ತಿದೆ. ಅಗತ್ಯಬಿದ್ದರೆ ಶಾಸಕ ವಿರೂಪಾಕ್ಷಪ್ಪ ಅವರನ್ನು ಕರೆದು ವಿಚಾರಣೆ ನಡೆಸುತ್ತೇವೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕಿದ್ದು, ದೂರು ಕೊಟ್ಟಿರುವವರನ್ನು ಗೌರವಿಸುತ್ತೇವೆ. ಅವರ ಧೈರ್ಯಕ್ಕೆ ಮೆಚ್ಚುಗೆ ಇದೆ, ಈ ರೀತಿ ಭ್ರಷ್ಟಾಚಾರ ನಿಗ್ರಹವಾಗಬೇಕು ಎಂದರು.

ಬೆಂಗಳೂರಿನಲ್ಲಿ ಲೋಕಾಯುಕ್ತ ಕಚೇರಿ, ಜಿಲ್ಲಾ ಮಟ್ಟದಲ್ಲಿ ಕೂಡ ನಮ್ಮ ಲೋಕಾಯುಕ್ತ ಪೊಲೀಸರು, ಸಿಬ್ಬಂದಿ ಇರುತ್ತಾರೆ. ಕಾನೂನು ಎಲ್ಲರಿಗೂ ಒಂದೇ. ಯಾರಿಗೇ ಆಗಲಿ ಭ್ರಷ್ಟಾಚಾರ, ಲಂಚಗುಳಿತನ ಗಮನಕ್ಕೆ ಬಂದರೆ ದೂರು ನೀಡಬೇಕು. ನಮ್ಮ ಕೆಲಸವಾಗಬೇಕಾದರೆ ಲಂಚ ಕೊಡಬೇಕಲ್ಲ ಎಂದು ಹೇಳಿ ಸುಮ್ಮನಾಗಬಾರದು, ಸಾರ್ವಜನಿಕರು ಅಧಿಕಾರಿಗಳ ಬಗ್ಗೆ ಭೀತಿಗೊಳಗಾಗಬಾರದು ಎಂದರು.

ಶಾಸಕ ಪುತ್ರ ಸಿಕ್ಕಿಬಿದ್ದಿದ್ದು ಹೇಗೆ?: ಲೋಕಾಯುಕ್ತ ಸಿಬ್ಬಂದಿಯ ಕಾರ್ಯಾಚರಣೆ ವಿವರಿಸಿದ ನ್ಯಾಯಮೂರ್ತಿಗಳು, ಈ ರೀತಿ ಅಕ್ರಮ ನಡೆದಾಗ ನಮಗೆ ದೂರು ನೀಡಿದರೆ ಬಂದರೆ ಎಂತಹ ತಿಮಿಂಗಲುಗಳನ್ನು ಹಿಡಿದು ಹಾಕಬಹುದು ಎಂಬುದಕ್ಕೆ ಈ ಪ್ರಕರಣ ಸಾಕ್ಷಿ. ದೊಡ್ಡು ಕೊಟ್ಟು ಕೆಲಸ ಮಾಡಿಸಿಕೊಳ್ಳಬೇಡಿ. ಪ್ರತಿ ಜಿಲ್ಲೆಯಲ್ಲೂ ನಮ್ಮ ತಂಡ ಇದೆ. ಈ ಪ್ರಕರಣದಲ್ಲಿ ಐವರ ಮೇಲೆ ಎಫ್​ಐಆರ್​ ಆಗಿದೆ. ಪ್ರಶಾಂತ್ ಎನ್ನುವ ಅಕೌಂಟೆಂಟ್ ಜೊತೆಗೆ ಮೂರು ಜನ ಲಂಚ ಕೊಡುವವರು ಇದ್ದರು. ದುಡ್ಡು ಕೊಟ್ರೆ ಟೆಂಡರ್ ಮಾಡಿಕೊಡ್ತಿವಿ ಅಂತ ಹೇಳಿದ್ರು ಎಂದು ದೂರುದಾರರು ದೂರು ಕೊಟ್ಟಿದ್ದಾರೆ. ಯಾರು ಅಮೌಂಟ್ ಸ್ವೀಕಾರ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

ಲೋಕಾಯುಕ್ತ ಮೂಲಗಳ ಪ್ರಕಾರ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮುಖ್ಯ ಖಾತೆ ಅಧಿಕಾರಿ ಪ್ರಶಾಂತ್ ಅವರು ಕರ್ನಾಟಕ ಸಾಬೂನು ಮತ್ತು ಮಾರ್ಜಕ ಲಿಮಿಟೆಡ್ (KSDL) ಕಚೇರಿಯಲ್ಲಿ ಗುತ್ತಿಗೆದಾರರಿಂದ 40 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ನಿನ್ನೆ ಸಂಜೆ ಪ್ರಶಾಂತ್​ನನ್ನು ಬಂಧಿಸಿದ್ದ ಲೋಕಾಯುಕ್ತ ಪೊಲೀಸರು ಇಂದು ಬೆಳಿಗ್ಗೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು. ಕೋರ್ಟ್ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಇನ್ನೂ ರೇಡ್ ಬಾಕಿ ಇರುವ ಹಿನ್ನೆಲೆಯಲ್ಲಿ ಪ್ರಾಥಮಿಕ ತನಿಖಾ ಹಂತ ಪೂರ್ಣಗೊಂಡ ನಂತರ ಲೋಕಾಯುಕ್ತ ಅಧಿಕಾರಿಗಳು ತಮ್ಮ ಕಸ್ಟಡಿಗೆ ಕೇಳುವ ಸಾಧ್ಯತೆಗಳಿವೆ. 

SCROLL FOR NEXT