ರಾಜ್ಯ

ಮೈಸೂರು: ಚಾಮುಂಡಿ ಬೆಟ್ಟದ ಕುರುಚಲು ಪ್ರದೇಶದಲ್ಲಿ ಅಗ್ನಿ ಅವಘಡ

Manjula VN

ಮೈಸೂರು: ಚಾಮುಂಡಿ ಬೆಟ್ಟದ ನಂದಿ ವಿಗ್ರಹದ ಪಕ್ಕದಲ್ಲಿರುವ ಕುರುಚಲು ಪ್ರದೇಶದಲ್ಲಿ ಶನಿವಾರ ಅಗ್ನಿ ಅವಘಡ ಸಂಭವಿಸಿತ್ತು.

ಬೆಟ್ಟಗಳ ಮೇಲಿನ ಒಣ ಹುಲ್ಲಿಗೆ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ ಚಾಮುಂಡಿ ಬೆಟ್ಟದ ನಿವಾಸಿಗಳು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅರಣ್ಯ ಸಿಬ್ಬಂದಿಯೊಂದಿಗೆ ಸ್ಥಳಕ್ಕಾಗಮಿಸಿದ ಅಧಿಕಿಕಾರಿಗಳು, ಸುಮಾರು 10 ಎಕರೆ ಬೆಟ್ಟದವರೆಗೆ ಹರಡಿದ್ದ ಭಾರಿ ಬೆಂಕಿಯನ್ನು ನಂದಿಸಲು ಕಾರ್ಯಾಚರಣೆ ಆರಂಭಿಸಿದರು. ಸುಮಾರು ನಾಲ್ಕು ಗಂಟೆಗಳ ಕಾರ್ಯಾಚರಣೆ ಬಳಿಕ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ ಗುಂಡ್ಲುಪೇಟೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟದಲ್ಲಿಯೂ ನಿನ್ನೆ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿತ್ತು.

ಮಧ್ಯಾಹ್ನ 12.30ರ ಸುಮಾರಿಗೆ ಗೌರಿಕಲ್ಲು ಗುಡ್ಡ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸುಮಾರು ಎರಡು ಗಂಟೆಗಳ ಕಾಲ ಬೆಂಕಿ ನಂದಿಸಲು ಅರಣ್ಯಾಧಿಕಾರಿಗಳು ಹರಸಾಹಸಪಟ್ಟರು. ಮಧ್ಯಾಹ್ನ 2.30ರ ಸುಮಾರಿಗೆ ಬೆಂಕಿ ನಂದಿಸಲಾಯಿತು ಎಂದು ತಿಳಿಸಿದ್ದಾರೆ. ಅಂದಾಜಿನ ಪ್ರಕಾರ ಸುಮಾರು 8 ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ ಎಂದು ತಿಳಿದುಬಂದಿದೆ.

SCROLL FOR NEXT